ಸೋಷಿಯಲ್ ಮೀಡಿಯಾದಲ್ಲಿ ‘ಹವಾ’ ಮಾಡಲು ಹೋಗಿ ಜೈಲು ಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿ ನಡೆದಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನಿಯಮ ಮೀರಿ ಖಡ್ಗ ಬಳಸಿ ರೀಲ್ಸ್ ಮಾಡಿದ ಯುವಕರನ್ನು ಕಿತ್ತೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.


ಎಂ.ಕೆ. ಹುಬ್ಬಳ್ಳಿ ಪಟ್ಟಣದ ಹೊರವಲಯದ ಎನ್.ಎಚ್-48 ರಸ್ತೆಯ ಪೆಟ್ರೋಲ್ ಪಂಪ್ ಬಳಿ ಜೈದ್ ನೂರಅಹಮ್ಮದ ಸನದಿ ಎಂಬ ಯುವಕನ ಹುಟ್ಟುಹಬ್ಬದ ಆಚರಣೆ ಅತಿರೇಕಕ್ಕೆ ಹೋಗಿತ್ತು. ಯಮಹಾ ಬೈಕ್ ಮೇಲೆ ಸ್ಟೈಲಿಶ್ ಆಗಿ ಬಂದ ಜೈದ್, ಹೋಂಡಾ ಶೈನ್ ಬೈಕ್ ಮೇಲೆ 5 ಕೇಕ್ ಇಟ್ಟು ಸಾರ್ವಜನಿಕವಾಗಿ ಖಡ್ಗದಿಂದ ಕತ್ತರಿಸಿ ಸಂಭ್ರಮಿಸಿದ್ದನು. ಈ ದೃಶ್ಯಗಳನ್ನು ರೇಹಾನ್ ಎಂಬಾತ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದನು. ಇದನ್ನು ಗಂಭೀರವಾಗಿ ಪರಿಗಣಿಸಿದ ಕಿತ್ತೂರು ಪೊಲೀಸರು, ಇನ್‌ಸ್ಟಾ ವಿಡಿಯೋ ಆಧರಿಸಿ ಜೈದ್ ಮತ್ತು ರೇಹಾನ್‌ನನ್ನು ಬಂಧಿಸಿದ್ದಾರೆ.
ಬಂಧಿತರ ಮೇಲೆ ಭಾರತೀಯ ಆಯುಧ ಕಾಯ್ದೆ 1959ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕುರಿತು ಎಚ್ಚರಿಕೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು, “ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಪಡೆಯಲು ಕಾನೂನು ಕೈಗೆತ್ತಿಕೊಂಡರೆ ಜೈಲು ಶಿಕ್ಷೆ ಗ್ಯಾರಂಟಿ. ಪೋಷಕರು ತಮ್ಮ ಮಕ್ಕಳ ಚಲನವಲನದ ಮೇಲೆ ನಿಗಾ ಇಡಬೇಕು” ಎಂದು ಖಡಕ್ ಸಂದೇಶ ನೀಡಿದ್ದಾರೆ.
