• ಭ್ರಷ್ಟಾಚಾರದ ಆರೋಪದ ನಡುವೆ ಸಚಿವರ ದೈವದರ್ಶನ
• ಸಂಕಷ್ಟ ಹರಿಸಲು ಪಂಡೋಖರ್ ಮಹಾರಾಜರ ಮೊರೆ
• ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ಸಚಿವ ತಿಮ್ಮಾಪುರ
• ಕುರ್ಚಿ ಉಳಿಸಿಕೊಳ್ಳಲು ಮಾರುತಿ ಮೊರೆ ಹೋದ ಸಚಿವರು!

ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಆರೋಪ ಹಾಗೂ ಸ್ವಪಕ್ಷೀಯರೇ ಬೆರಳು ತೋರಿಸುತ್ತಿರುವ ಈ ಸಂದಿಗ್ಧ ಸಮಯದಲ್ಲಿ, ಸಚಿವ ಆರ್.ಬಿ. ತಿಮ್ಮಾಪುರ ಅವರು ದೈವದ ಮೊರೆ ಹೋಗಿದ್ದಾರೆ. ರಾಜಕೀಯ ಭವಿಷ್ಯದ ಆತಂಕದ ನಡುವೆ, ಮಧ್ಯಪ್ರದೇಶದ ಪ್ರಸಿದ್ಧ ಮಾರುತಿ ದೇವಸ್ಥಾನದ ಪಂಡೋಖರ್ ಮಹಾರಾಜರನ್ನು ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ಮತ್ತು ಕಿಕ್‌ಬ್ಯಾಕ್ ಆರೋಪ ಕೇಳಿಬಂದ ಬೆನ್ನಲ್ಲೇ ಇಬ್ಬರು ಹಿರಿಯ ಅಧಿಕಾರಿಗಳ ಅಮಾನತು ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಚಿವರ ಪುತ್ರನದ್ದು ಎನ್ನಲಾದ ಆಡಿಯೋ ಕ್ಲಿಪ್ ಬಹಿರಂಗಗೊಂಡ ನಂತರ ವಿರೋಧ ಪಕ್ಷಗಳು ತಿಮ್ಮಾಪುರ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ರಾಜಕೀಯ ಸಂಕಷ್ಟದಿಂದ ಪಾರಾಗಲು ಸಚಿವ ಆರ್.ಬಿ. ತಿಮ್ಮಾಪುರ ಅವರು ಪತ್ನಿ ಹಾಗೂ ಸಹೋದರಿಯೊಂದಿಗೆ ಮಧ್ಯಪ್ರದೇಶದ ದತಿಯಾ ಜಿಲ್ಲೆಯ ಪಂಡೋಕರ್ ನಗರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಸಿದ್ಧ ಗುರುಶರಣ ಶರ್ಮಾ (ಪಂಡೋಖರ್ ಮಹಾರಾಜ) ಅವರ ದರ್ಶನ ಪಡೆದು, ತಮ್ಮ ರಾಜಕೀಯ ಜೀವನದಲ್ಲಿ ಎದುರಾಗಿರುವ ಅಡೆತಡೆಗಳ ನಿವಾರಣೆಗೆ ವಿಶೇಷ ಮಾರ್ಗದರ್ಶನ ಪಡೆದಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ, ಕರ್ನಾಟಕದ ಅಬಕಾರಿ ಸಚಿವರು ತಮ್ಮ ದರ್ಶನಕ್ಕೆ ಬಂದಿರುವ ಕುರಿತು ಪಂಡೋಕರ್ ಮಹಾಸ್ವಾಮಿಗಳೇ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರದ ಆರೋಪದಿಂದ ಸಚಿವರ ಕುರ್ಚಿ ಅಲುಗಾಡುತ್ತಿರುವ ಬೆನ್ನಲ್ಲೇ ನಡೆದ ಈ ದೈವದರ್ಶನ, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳ ವಾಗ್ದಾಳಿ ಮತ್ತು ಆಂತರಿಕ ಒತ್ತಡದ ನಡುವೆ ಈ “ದೈವ ಭಕ್ತಿ” ಸಚಿವರನ್ನು ಕಾಪಾಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
