ಬೆಳಗಾವಿಯ ಸದಾಶಿವ ನಗರದಲ್ಲಿ ಇಂದು ಶಿವನ ಆರಾಧನೆ ಜೋರಾಗಿದೆ. ವೈಕುಂಠ ಧಾಮ ಸ್ಮಶಾನದ ಶಿವಮಂದಿರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಕ್ತರ ದಂಡೇ ಹರಿದು ಬಂದಿದೆ.

ಬೆಳಗಾವಿಯ ಸದಾಶಿವ ನಗರದಲ್ಲಿರುವ ವೈಕುಂಠ ಧಾಮ ಸ್ಮಶಾನದ ಶಿವಮಂದಿರದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಬೆಳಗಿನ ಜಾವದಿಂದಲೇ ಶಿವಲಿಂಗಕ್ಕೆ ವಿಶೇಷ ಪೂಜೆ, ಅಭಿಷೇಕ ಮತ್ತು ಅಲಂಕಾರಗಳನ್ನು ಮಾಡಲಾಗಿತ್ತು. ಮಂದಿರದ ಆವರಣವೆಲ್ಲಾ ‘ಓಂ ನಮಃ ಶಿವಾಯ’ ಘೋಷಣೆಯಿಂದ ಮುಳುಗಿಹೋಗಿದ್ದು, ಭಕ್ತರು ಭಕ್ತಿಪರವಶರಾಗಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಹಾಪ್ರಸಾದವನ್ನು ಸವಿದರು. ಸ್ಥಳೀಯ ಸಮಿತಿಯವರು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದರು. ಸ್ಮಶಾನದ ಆವರಣದಲ್ಲಿದ್ದರೂ, ಈ ಶಿವಮಂದಿರದಲ್ಲಿ ನಡೆಯುವ ಶಿವರಾತ್ರಿ ಆಚರಣೆ ವಿಶೇಷ ಅರ್ಥವನ್ನು ಪಡೆದುಕೊಂಡಿದ್ದು, ಜೀವನದ ನಶ್ವರತೆಯನ್ನು ಮರೆತು ಭಗವಂತನಲ್ಲಿ ಲೀನವಾಗುವ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
