ಗಡಿನಾಡ ಬೆಳಗಾವಿ ಕಳೆದ ಐದು ದಿನಗಳ ಕಾಲ ಭಕ್ತಿ ಮತ್ತು ಆಧ್ಯಾತ್ಮದ ಅಲೆಯಲ್ಲಿ ತೇಲಿತು. ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಪವಿತ್ರ ಪ್ರವಾಸವು ನಗರದಾದ್ಯಂತ ಭಕ್ತಿಭಾವದ ಸಂಚಲನ ಮೂಡಿಸಿತು. 53 ನದಿಗಳ ನೀರಿನ ಅಭಿಷೇಕದೊಂದಿಗೆ ಸಂಪನ್ನಗೊಂಡ ಸಂಪನ್ನಗೊಂಡಿತು.

ಬೆಳಗಾವಿಯಾದ್ಯಂತ ಫೆಬ್ರವರಿ 11 ರಿಂದ 15 ರವರೆಗೆ ನಡೆದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಧಾರ್ಮಿಕ ಪ್ರವಾಸವು ಒಂದು ಅಪೂರ್ವ ‘ಆಧ್ಯಾತ್ಮಿಕ ಜಾತ್ರೆ’ಯಾಗಿ ಮಾರ್ಪಟ್ಟಿತು. ರಾಣಿ ಚನ್ನಮ್ಮನಗರದ ಸತ್ಯಪ್ರಮೋದ ಸಭಾಗೃಹದಲ್ಲಿ ಭಕ್ತರು ಶ್ರೀಗಳಿಗೆ 53 ಶೇಷವಸ್ತ್ರಗಳನ್ನು ಸಮರ್ಪಿಸಿ ಗೌರವಿಸಿದರೆ, ದೇಶದ ಪವಿತ್ರ 53 ನದಿಗಳ ನೀರಿನಿಂದ ನಡೆದ ವಿಶೇಷ ಅಭಿಷೇಕವು ಜಯ ಜಯ ಮಂತ್ರಘೋಷದೊಂದಿಗೆ ಸಭಾಗೃಹವನ್ನು ಪಾವನಗೊಳಿಸಿತು. ಮಾಳಮಾರುತಿಯ ರಾಯರಮಠದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಕೃತಾರ್ಥರಾದರು.
ಈ ಪ್ರವಾಸದ ಮತ್ತೊಂದು ವಿಶೇಷವೆಂದರೆ, ಶ್ರೀಗಳು ನಗರದ ಅನೇಕ ಭಕ್ತರ ಮನೆಗಳಿಗೆ ತೆರಳಿ ಪಾದಪೂಜೆ ಸ್ವೀಕರಿಸಿ ಆಶೀರ್ವದಿಸಿದ್ದು. ಇದಲ್ಲದೆ, ಬಿ.ಕೆ. ಮಾಡಲ್‌ನಲ್ಲಿರುವ ಶ್ರೀ ಸತ್ಯಾತ್ಮತೀರ್ಥ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನ ನೂತನ ಪ್ರಯೋಗಾಲಯವನ್ನು ಶ್ರೀಗಳು ಉದ್ಘಾಟಿಸಿದರು. “ಜ್ಞಾನ ಮತ್ತು ಧರ್ಮ ಜೊತೆಯಾದಾಗ ರಾಷ್ಟ್ರದ ಭವಿಷ್ಯ ಉಜ್ವಲವಾಗುತ್ತದೆ” ಎಂಬ ಅವರ ಸಂದೇಶ ವಿದ್ಯಾರ್ಥಿಗಳಲ್ಲಿ ಹೊಸ ಪ್ರೇರಣೆ ತುಂಬಿತು. ಎಸ್ಇಎಸ್ ಸೊಸೈಟಿಯ ನೂತನ ಆಡಳಿತ ಮಂಡಳಿಗೆ ನೇಮಕಾತಿ ಪತ್ರ ವಿತರಿಸಿದ ಶ್ರೀಗಳು, ಸಂಸ್ಥೆಗಳು ಸೇವಾಭಾವದಿಂದ ಬೆಳೆಯಬೇಕು ಎಂದು ಮಾರ್ಗದರ್ಶನ ನೀಡಿದರು.
