• ಸದಾಶಿವನಗರ ಶಿವಾಲಯದಲ್ಲಿ ಮಹಾಶಿವರಾತ್ರಿ ಸಡಗರ.
• ಹಿರೇಮಠ ಸ್ವಾಮೀಜಿಗಳ ನೇತೃತ್ವದಲ್ಲಿ ವಿಶೇಷ ಪೂಜೆ.
• ರಾಯಕಾ ಸಮಾಜದ ಶಿವಮಂದಿರದಲ್ಲಿ ಮಹಾ ಆರತಿ.
• ಸೋಮವಾರ ಸಾರ್ವಜನಿಕರಿಗೆ ಮಹಾಪ್ರಸಾದ ವ್ಯವಸ್ಥೆ.

ಬೆಳಗಾವಿಯ ಸದಾಶಿವನಗರ ಹಾಗೂ ಮಹಾತ್ಮಾ ಗಾಂಧಿ ಭವನದ ಆವರಣದಲ್ಲಿರುವ ಶಿವಮಂದಿರಗಳಲ್ಲಿ ಇಂದು ಮಹಾಶಿವರಾತ್ರಿಯ ಭಕ್ತಿ ಪರವಶತೆ ಮನೆಮಾಡಿತ್ತು. ಹಿರೇಮಠ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು.
ಬೆಳಗಾವಿ ಸದಾಶಿವನಗರದ ಶ್ರೀ ಶಿವಾಲಯದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಇಂದು ಮುಂಜಾನೆಯಿಂದಲೇ ದೇವರಿಗೆ ಮಹಾ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ರುದ್ರಾಭಿಷೇಕಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಹಿರೇಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಿದ ಈ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಬಿಲ್ವಾರ್ಚಣೆ, ಅಷ್ಟೋತ್ತರ ಹಾಗೂ ಆಕರ್ಷಕ ಅಲಂಕಾರ ಪೂಜೆಗಳು ಭಕ್ತರ ಗಮನ ಸೆಳೆದವು. ಸಾವಿರಾರು ಭಕ್ತಾದಿಗಳು ಸುದೀರ್ಘ ಸರತಿ ಸಾಲಿನಲ್ಲಿ ನಿಂತು ಮಹಾದೇವನ ದರ್ಶನ ಪಡೆದು, ಹರಹರ ಮಹಾದೇವ ಘೋಷಣೆಗಳೊಂದಿಗೆ ಮಂದಿರದ ಆವರಣದಲ್ಲಿ ಭಕ್ತಿಭಾವ ಮೆರೆದರು. ಬೈಟ್
ಇದೇ ವೇಳೆ, ನಗರದ ಮಹಾತ್ಮಾ ಗಾಂಧೀ ಭವನದ ಆವರಣದಲ್ಲಿರುವ ರಾಯಕಾ ಸಮಾಜದ ಶಿವಮಂದಿರದಲ್ಲೂ ಶಿವರಾತ್ರಿ ಪರ್ವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಿವಲಿಂಗಕ್ಕೆ ವಿಶೇಷ ಪೂಜೆ, ಅಲಂಕಾರ ಹಾಗೂ ಮಹಾ ಆರತಿಯನ್ನು ನೆರವೇರಿಸುವ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಗುತ್ತಿರುವ ಈ ಉತ್ಸವದ ಅಂಗವಾಗಿ ನಾಳೆ ಸೋಮವಾರ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
