Belagavi

ಬೆಳಗಾವಿ ಪಾಲಿಕೆಯ ‘ಪಿಂಕ್ ಟಾಯ್ಲೆಟ್’ ಯೋಜನೆ ಬರೀ ಕಾಗದದ ಮೇಲೆ: ಮಹಿಳೆಯರ ಕಣ್ಣಿಗೆ ‘ಗುಲಾಬಿ’ ಮಣ್ಣು!

Share

ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಅಂದ್ರೆ ಸಾಕು ಹೊಸ ಯೋಜನೆಗಳ ಸುರಿಮಳೆಯೇ ಆಗುತ್ತೆ. ಆದರೆ ಐದು ವರ್ಷಗಳ ಹಿಂದೆ ಘೋಷಣೆಯಾದ ‘ಪಿಂಕ್ ಟಾಯ್ಲೆಟ್’ ಯೋಜನೆ ಎಲ್ಲಿ ಹೋಯ್ತು? ಕಾಗದದ ಮೇಲಿರೋ ಈ ಗುಲಾಬಿ ಬಣ್ಣದ ಯೋಜನೆ ವಾಸ್ತವಕ್ಕೆ ಬರೋದು ಯಾವಾಗ? ಪಾಲಿಕೆಯ ನಿರ್ಲಕ್ಷ್ಯದ ಕುರಿತ ವಿಶೇಷ ವರದಿ ಇಲ್ಲಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಅಕ್ಷರಶಃ ‘ಮಾತು ಹೆಚ್ಚು ಕೆಲಸ ಕಡಿಮೆ’ ಎಂಬಂತಾಗಿದೆ. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ 2021ರಲ್ಲಿ ಅಬ್ಬರದಿಂದ ಘೋಷಣೆಯಾದ 20 ‘ಪಿಂಕ್ ಟಾಯ್ಲೆಟ್’ ಯೋಜನೆ. ಐದು ವರ್ಷ ಕಳೆದರೂ ನಗರದ ಯಾವೊಂದು ಮೂಲೆಯಲ್ಲೂ ಒಂದು ಪಿಂಕ್ ಟಾಯ್ಲೆಟ್‌ನ ಇಟ್ಟಿಗೆಯೂ ಬಿದ್ದಿಲ್ಲ. ಪ್ರತಿ ವರ್ಷ ಬಜೆಟ್‌ನಲ್ಲಿ ಈ ಯೋಜನೆಗಾಗಿ 1 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆಯಾದರೂ, ಅನುಷ್ಠಾನದಲ್ಲಿ ಮಾತ್ರ ಪಾಲಿಕೆ ಶೂನ್ಯ ಸಾಧನೆ ಮಾಡಿದೆ. ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ, ಫೀಡಿಂಗ್ ರೂಮ್‌ನಂತಹ ಹೈಟೆಕ್ ಸೌಲಭ್ಯಗಳ ಕನಸು ಬಿತ್ತಿದ ಪಾಲಿಕೆ ಈಗ ಮಹಿಳೆಯರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆ.

ವಿಪರ್ಯಾಸವೆಂದರೆ, ಈ ಅವಧಿಯಲ್ಲಿ ಮಹಿಳಾ ಮೇಯರ್, ಮಹಿಳಾ ಉಪಮೇಯರ್ ಮತ್ತು ಮಹಿಳಾ ಆಯುಕ್ತರೇ ಅಧಿಕಾರದಲ್ಲಿದ್ದರು. ಆದರೂ ಮಹಿಳೆಯರ ಈ ಮೂಲಭೂತ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬುದು ದುರದೃಷ್ಟಕರ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೋಟಿ ಕೋಟಿ ಹಣ ವ್ಯರ್ಥವಾಗುತ್ತಿದ್ದರೂ, ಮಾರುಕಟ್ಟೆಗೆ ಬರುವ ಸಾವಿರಾರು ಮಹಿಳೆಯರಿಗೆ ಶೌಚಾಲಯವಿಲ್ಲದೆ ಪರದಾಡುವಂತಾಗಿದೆ. ಮುಂದಿನ ಬಜೆಟ್ ಮಂಡನೆಗೂ ಮುನ್ನ ಹಳೇ ಘೋಷಣೆಗಳ ಲೆಕ್ಕ ಕೊಡಿ ಎಂದು ಜನ ಈಗ ಪಾಲಿಕೆಯನ್ನು ಪ್ರಶ್ನಿಸುತ್ತಿದ್ದಾರೆ. ಬರೀ ಫೈಲ್‌ಗಳಲ್ಲಿ ನಿದ್ದೆ ಮಾಡುತ್ತಿರುವ ಈ ಯೋಜನೆಗೆ ಯಾವಾಗ ಮುಕ್ತಿ ಸಿಗಲಿದೆ ಕಾದು ನೋಡಬೇಕಿದೆ.

 

Tags:

error: Content is protected !!