Belagavi

ದಕ್ಷಿಣ ಕಾಶಿ ಕಪಿಲೇಶ್ವರದಲ್ಲಿ ಮಹಾಶಿವರಾತ್ರಿ ಸಂಭ್ರಮ; ಮಹಾಪ್ರಸಾದಕ್ಕೆ ಸಾಕ್ಷಿಯಾದ ಸಾವಿರಾರು ಶಿವಭಕ್ತರು

Share

ಬೆಳಗಾವಿಯ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಸಂಭ್ರಮ ಮುಗಿಲುಮುಟ್ಟಿದೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಿಶೇಷ ಪೂಜಾ ಕೈಂಕರ್ಯಗಳ ನಂತರ, ಇಂದು ಮಹಾಪ್ರಸಾದಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು.

ಬೆಳಗಾವಿಯ ಜೀವಾಳವಾಗಿರುವ ದಕ್ಷಿಣ ಕಾಶಿ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ಕಳೆದ ಮೂರು ದಿನಗಳಿಂದ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮೊನ್ನೆ ನಡೆದ ಅಪೂರ್ವ ಕ್ಷೀರಾಭಿಷೇಕದೊಂದಿಗೆ ಹಬ್ಬದ ಸಂಭ್ರಮಕ್ಕೆ ಚಾಲನೆ ಸಿಕ್ಕರೆ, ನಿನ್ನೆ ಭಗವಂತನಿಗೆ ಅತ್ಯಂತ ಪ್ರಿಯವಾದ ಮಹಾರುದ್ರಾಭಿಷೇಕವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ನಂತರ ನಡೆದ ವಿಶೇಷ ಆಲಂಕಾರ ಮತ್ತು ಮಹಾ ಆರತಿಯು ಭಕ್ತರ ಕಣ್ಮನ ಸೆಳೆಯಿತು.

ಇಂದು ಮಹಾಶಿವರಾತ್ರಿಯ ಮುಖ್ಯ ದಿನವಾಗಿದ್ದು, ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ಭಕ್ತರ ದಂಡು ಕಂಡುಬರುತ್ತಿದೆ. ಶಿವನ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದು, ‘ಓಂ ನಮಃ ಶಿವಾಯ’ ಘೋಷಣೆ ಮುಗಿಲು ಮುಟ್ಟಿದೆ. ದೇವಸ್ಥಾನದ ಆವರಣದಲ್ಲಿ ಶಿವನ ಕೃಪೆಗೆ ಪಾತ್ರರಾಗಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಭವ್ಯ ಪಲ್ಲಕ್ಕಿ ಸೇವೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

ಮಧ್ಯಾಹ್ನದ ವೇಳೆಗೆ ದೇವಸ್ಥಾನದ ಆವರಣದಲ್ಲಿ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾವಿರಾರು ಭಕ್ತರಿಗೆ ಮಹಾಪ್ರಸಾದ ವಿತರಣೆ ನಡೆಯುತ್ತಿದೆ. ದೇವಸ್ಥಾನ ಸಮಿತಿಯು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದು, ಬೆಳಗಾವಿ ನಗರದಾದ್ಯಂತ ಶಿವನ ಜಪವೇ ಕೇಳಿಬರುತ್ತಿದೆ. ಇಡೀ ವಾತಾವರಣವೇ ಭಕ್ತಿಮಯವಾಗಿ ಪರಿವರ್ತನೆಯಾಗಿದ್ದು, ಹಬ್ಬದ ಸಂಭ್ರಮ ಮನೆಮಾಡಿದೆ.

Tags:

error: Content is protected !!