• ಬೆಳಗಾವಿಯ ಯೋಧ ಜಗದೀಶ್ ಶಿಂಧೆ ಹುತಾತ್ಮ
• ಹರಿಯಾಣದಲ್ಲಿ ನಡೆದ ವಾಹನ ಅಪಘಾತದಲ್ಲಿ ವೀರಮರಣ
• ನಾಳೆ ಸ್ವಗ್ರಾಮ ಕಂಗ್ರಾಳಿಯಲ್ಲಿ ಮಿಲಿಟರಿ ಅಂತ್ಯಕ್ರಿಯೆ
• ದೇಶ ಕಾಯುವ ಕಾಯಕದಲ್ಲಿ ಪ್ರಾಣತ್ಯಾಗ ಮಾಡಿದ ವೀರಪುತ್ರ

ದೇಶ ಕಾಯುವ ಸೇವೆಯಲ್ಲಿ ತೊಡಗಿದ್ದ ಬೆಳಗಾವಿ ತಾಲೂಕಿನ ಕಂಗ್ರಾಳಿ ಖುರ್ದ್ ಗ್ರಾಮದ ಸುಪುತ್ರ ಜಗದೀಶ್ ಶಿಂಧೆ ಅವರು ಹರಿಯಾಣದ ಅಂಬಾಲಾದಲ್ಲಿ ನಡೆದ ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದಾರೆ. ಕರ್ತವ್ಯದ ಮೇಲಿದ್ದಾಗಲೇ ಸಂಭವಿಸಿದ ಈ ದುರ್ಘಟನೆಯಿಂದ ಇಡೀ ಗ್ರಾಮವೇ ಕಂಬನಿ ಮಿಡಿಯುತ್ತಿದೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಗದೀಶ್ ಶಿಂದೆ ಅವರು ಫೆಬ್ರವರಿ 2ರ ಸೋಮವಾರದಂದು ಹರಿಯಾಣದ ಅಂಬಾಲಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡೆದ ಭೀಕರ ವಾಹನ ಅಪಘಾತದಲ್ಲಿ ವೀರಗತಿ ಹೊಂದಿದ್ದಾರೆ. ಅತ್ಯಂತ ಶಿಸ್ತುಬದ್ಧ ಹಾಗೂ ದೇಶಸೇವೆಗೆ ಸದಾ ಸಜ್ಜಾಗಿರುತ್ತಿದ್ದ ಜಗದೀಶ್ ಅವರ ಅಕಾಲಿಕ ನಿಧನದಿಂದ ಅವರ ಕುಟುಂಬದ ಮೇಲೆ ದುಃಖದ ಪರ್ವತವೇ ಕುಸಿದಿದೆ. ಮೃತ ಯೋಧ ಪತ್ನಿ, ಇಬ್ಬರು ಮಕ್ಕಳು ಹಾಗೂ ಪೋಷಕರನ್ನು ಅಗಲಿದ್ದಾರೆ. ಸದ್ಯ ಹರಿಯಾಣದಿಂದ ಯೋಧನ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಸಕಲ ಸಿದ್ಧತೆಗಳು ನಡೆಯುತ್ತಿವೆ.ಬುಧವಾರ ಅಂದರೆ ಫೆಬ್ರವರಿ 4ರಂದು ಯೋಧ ಜಗದೀಶ್ ಶಿಂದೆ ಅವರ ಪಾರ್ಥಿವ ಶರೀರ ಬೆಳಗಾವಿಗೆ ಆಗಮಿಸಲಿದೆ. ನಂತರ ಅವರ ಸ್ವಗ್ರಾಮವಾದ ಕಂಗ್ರಾಳಿ ಖುರ್ದ್‌ನಲ್ಲಿ ಸಕಲ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಶೋಕಸಾಗರ ಆವರಿಸಿದ್ದು, ವಿವಿಧ ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ವೀರ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರಪುತ್ರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇಡೀ ಜಿಲ್ಲೆಯ ಜನತೆ ಪ್ರಾರ್ಥಿಸುತ್ತಿದ್ದಾರೆ.
