Belagavi

ಬೆಳಗಾವಿಯ ‘ಐಐಟಿಎಂ’ನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ‘ICTICS-2026’ ಉದ್ಘಾಟನೆ: ಹವಾಮಾನ ಬದಲಾವಣೆ ತಡೆಗೆ ಜಾಗತಿಕ ಮೌಲ್ಯಮಾಪನ

Share

• ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಜ್ಞಾನ ಸಂಗಮ
• ಹವಾಮಾನ ಬದಲಾವಣೆಗೆ ತಾಂತ್ರಿಕ ಮೌಲ್ಯಮಾಪನ
• ಭಾರತ-ರಷ್ಯಾ ವಿಜ್ಞಾನಿಗಳ ಮಹತ್ವದ ಚರ್ಚೆ
• ಸುಸ್ಥಿರ ಪರಿಸರಕ್ಕಾಗಿ ತಾಂತ್ರಿಕ ಹಸ್ತಕ್ಷೇಪ

ಬೆಳಗಾವಿಯ ಸುರೇಶ್ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಎಐಟಿಎಂ ಕಾಲೇಜಿನಲ್ಲಿ ಇಂದು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ಸಿಕ್ಕಿದೆ. ಭಾರತ ಮತ್ತು ರಷ್ಯಾದ ಘಟಾನುಘಟಿ ವಿಜ್ಞಾನಿಗಳು ಒಂದೆಡೆ ಸೇರಿ ಜಾಗತಿಕ ತಾಪಮಾನ ಹಾಗೂ ಸುಸ್ಥಿರ ಪರಿಸರದ ಬಗ್ಗೆ ಚರ್ಚೆ ನಡೆಸಲಾಯಿತು.
ಬೆಳಗಾವಿಯ ಸುರೇಶ್ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ (AITM), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಮತ್ತು ರಷ್ಯಾದ ಕರೇಲಿಯನ್ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ‘ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಪರಿಸರಕ್ಕಾಗಿ ತಾಂತ್ರಿಕ ಹಸ್ತಕ್ಷೇಪ’ (ICTICS-2026) ಎಂಬ ಅಂತರಾಷ್ಟ್ರೀಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಸಿಇಒ ಮಂಚಲವಾರ್ ಸುದಮ್ ಹರಿವಿಜಯ್ ಅವರು ಉದ್ಘಾಟಿಸಿದರು. ರಷ್ಯಾ ವಿಜ್ಞಾನ ಅಕಾಡೆಮಿಯ ಪ್ರತಿಷ್ಠಿತ ವಿಜ್ಞಾನಿಗಳಾದ ಡಾ. ಬಖ್ಮೆತ್ ಓಲ್ಗಾ ನಿಕೋಲೇವ್ನಾ ಮತ್ತು ಡಾ. ಲುಕಿನಾ ಎಲಿಜಾ ನಿಕೋಲೇವ್ನಾ ಸೇರಿದಂತೆ ಹಲವು ವಿದೇಶಿ ಗಣ್ಯರು ಭಾಗವಹಿಸಿ, ಜಾಗತಿಕ ಮಟ್ಟದಲ್ಲಿ ನೀರಿನ ಸಂಪನ್ಮೂಲ ನಿರ್ವಹಣೆ ಮತ್ತು ಪರಿಸರ ಸಮತೋಲನದ ಕುರಿತು ಬೆಳಕು ಚೆಲ್ಲಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಅಂಗಡಿ ಪಾಟೀಲ್ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಪರಿಸರ ಸಂರಕ್ಷಣೆಗೆ ತಂತ್ರಜ್ಞಾನದ ಕೊಡುಗೆ ಅಪಾರ ಎಂದರು. ಸಮ್ಮೇಳನದಲ್ಲಿ ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಉದ್ಯಮ ರಂಗದ ನಾಯಕರು ಒಂದೆಡೆ ಸೇರಿ ಸುಸ್ಥಿರ ಭವಿಷ್ಯಕ್ಕಾಗಿ ಬೇಕಾದ ನೂತನ ಆವಿಷ್ಕಾರಗಳ ಬಗ್ಗೆ ಸಂವಾದ ನಡೆಸಿದರು. ವಿಟಿಯು ರಿಜಿಸ್ಟ್ರಾರ್ ಪ್ರೊ. ಪ್ರಸಾದ್ ರಾಂಪುರೆ ಹಾಗೂ ಕೆನಡಾದ ನಿವೃತ್ತ ವಿಜ್ಞಾನಿ ಡಾ. ಸಿ. ರಾಜಶೇಖರ ಮೂರ್ತಿ ಅವರ ಉಪಸ್ಥಿತಿಯು ಸಮ್ಮೇಳನದ ಗಾಂಭೀರ್ಯವನ್ನು ಹೆಚ್ಚಿಸಿತ್ತು. ಡಾ. ಆನಂದ್ ದೇಶಪಾಂಡೆ ಮತ್ತು ಡಾ. ಧನಶ್ರೀ ಕುಲಕರ್ಣಿ ಅವರ ನೇತೃತ್ವದಲ್ಲಿ ನಡೆದ ಈ ಜಾಗತಿಕ ಸಮ್ಮೇಳನವು ಸಂಶೋಧನಾ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ನೀಡುವಲ್ಲಿ ಯಶಸ್ವಿಯಾಯಿತು.

Tags:

error: Content is protected !!