• ಪತ್ನಿಯ ತಲೆ ಬೋಳಿಸಿ ಪತಿ ವಿಕೃತಿ
• ಸಂಶಯದ ಬೆನ್ನೇರಿ ನಡೆದ ಭೀಕರ ಹಲ್ಲೆ
• ಕೊಲೆ ಯತ್ನದ ಆರೋಪದಡಿ ಪತಿ ಅರೆಸ್ಟ್
• ತೊದಲಬಾಗಿ ಗ್ರಾಮದಲ್ಲಿ ಅಮಾನವೀಯ ಘಟನೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಮಾನವೀಯತೆ ತಲೆತಗ್ಗಿಸುವ ಘಟನೆ ನಡೆದಿದೆ. ಪತ್ನಿಯ ನಡತೆ ಬಗ್ಗೆ ಶಂಕೆ ವ್ಯಕ್ತಪಡಿಸಿದ ಪತಿ, ಆಕೆಯ ತಲೆ ಬೋಳಿಸಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಶ್ವಿನಿ ಉಮೇಶ್ ಕೊಟ್ಟಲಗಿ (26) ಎಂಬಾಕೆಯ ಮೇಲೆ ಪತಿ ಉಮೇಶ್ ಕೊಟ್ಟಲಗಿ (31) ಎಂಬುವವನು ಈ ಅಮಾನವೀಯ ದೌರ್ಜನ್ಯ ಎಸಗಿದ್ದಾನೆ. ಜನವರಿ 31ರಂದು ರಾತ್ರಿ ಮನೆಗೆ ಬುತ್ತಿ ತೆಗೆದುಕೊಂಡು ಹೋಗಲು ಬಂದಿದ್ದ ಕಬ್ಬಿನ ಗ್ಯಾಂಗ್ ಮನ್ ಮೇಲೆ ಅನುಮಾನ ಪಟ್ಟ ಉಮೇಶ್, “ಬಾಗಿಲು ಹಾಕಿಕೊಂಡು ಬುತ್ತಿ ಕೊಡಲು ತಡವೇಕಾಯಿತು?” ಎಂದು ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಈ ವಾಗ್ವಾದ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ, ಎಲೆಕ್ಟ್ರಿಕ್ ಟ್ರಿಮ್ಮರ್‌ನಿಂದ ಅಶ್ವಿನಿಯ ತಲೆ ಬೋಳಿಸಿ ವಿರೂಪಗೊಳಿಸಿದ್ದಾನೆ. ಕೇವಲ ತಲೆ ಬೋಳಿಸುವುದಷ್ಟೇ ಅಲ್ಲದೆ, ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಈ ಹಿಂದೆ ಕೂಡ ಪತ್ನಿಯ ನಡತೆ ಬಗ್ಗೆ ಸಂಶಯ ಪಟ್ಟು ಉಮೇಶ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಹಲವು ಬಾರಿ ಹಿರಿಯರು ಬುದ್ಧಿ ಹೇಳಿದ್ದರೂ ಬುದ್ಧಿ ಕಲಿಯದ ಈತ ಈಗ ಪೈಶಾಚಿಕ ಕೃತ್ಯ ಮೆರೆದಿದ್ದಾನೆ. ಘಟನೆ ನಡೆದು ಎರಡು ದಿನಗಳ ಬಳಿಕ ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಪತಿ ಉಮೇಶ್‌ನನ್ನು ಕಂಬಿ ಹಿಂದೆ ತಳ್ಳಿದ್ದಾರೆ.
