• ಬಾಗಲಕೋಟೆ ಮುಚಖಂಡಿ ಕ್ರಾಸ್ ಬಳಿ ಭೀಕರ ಅಪಘಾತ
• ಕಬ್ಬಿನ ಟ್ರಾಲಿ ಮನೆ ಮೇಲೆ ಪಲ್ಟಿ
• ಟಂಟಂ ತಪ್ಪಿಸಲು ಹೋಗಿ ತಪ್ಪಿದ ಅನಾಹುತ
• ಜಿಗಿದು ಪ್ರಾಣ ಉಳಿಸಿಕೊಂಡ ಟ್ರಾಕ್ಟರ್ ಚಾಲಕ

ಬಾಗಲಕೋಟೆ ಹಳೆ ನಗರದ ಮುಚಖಂಡಿ ಕ್ರಾಸ್ ಬಳಿ ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಓವರ್‌ಟೇಕ್ ಮಾಡಲು ಬಂದ ಟಂಟಂ ವಾಹನವನ್ನು ತಪ್ಪಿಸಲು ಹೋಗಿ ಕಬ್ಬು ತುಂಬಿದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದ್ದು, ಪರಿಣಾಮ ಟ್ರಾಕ್ಟರ್ ಟ್ರಾಲಿ ಇಳಿಜಾರಿನಲ್ಲಿದ್ದ ಮನೆಯೊಂದರ ಮೇಲೆ ಬಿದ್ದಿದೆ.
ಲೋಕಪುರ ಸಮೀಪದ ಹೊಸಕೋಟೆಯಿಂದ ಶಿರೂರು ಬಳಿಯ ಮೆಲ್‌ಬ್ರೊ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ಈ ದುರ್ಘಟನೆ ಸಂಭವಿಸಿದೆ. ಚಾಲಕ ಮುಚಖಂಡಿ ಕ್ರಾಸ್ ಬಳಿ ಚಲಿಸುತ್ತಿದ್ದಾಗ, ಏಕಾಏಕಿ ಮುಂದೆ ಬಂದ ಟಂಟಂ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ವೇಗವಾಗಿ ಹೋಗುತ್ತಿದ್ದ ಟ್ರಾಕ್ಟರ್ ರಸ್ತೆ ಮಧ್ಯದ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಟ್ರಾಕ್ಟರ್ ರಸ್ತೆ ಮಧ್ಯೆಯೇ ಪಲ್ಟಿಯಾದರೆ, ಅದರ ಹಿಂದಿದ್ದ ಕಬ್ಬು ತುಂಬಿದ ಟ್ರೈಲರ್ ರಸ್ತೆಯ ಪಕ್ಕದ ಇಳಿಜಾರಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಚಾಲಕ ಸಮಯಪ್ರಜ್ಞೆ ಮೆರೆದು ಟ್ರಾಕ್ಟರ್‌ನಿಂದ ಕೆಳಕ್ಕೆ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮನೆಯ ಮೇಲೆ ಟ್ರಾಲಿ ಬಿದ್ದಿದ್ದರೂ ಸಹ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಎತ್ತರದ ರಸ್ತೆ ಹಾಗೂ ಆಳವಾದ ಇಳಿಜಾರು ಇದ್ದ ಕಾರಣ ಅಪಘಾತದ ತೀವ್ರತೆ ಹೆಚ್ಚಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರ ದಟ್ಟಣೆ ಉಂಟಾಗಿದ್ದ ರಸ್ತೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
