bagalkot

ಕೋರ್ಟ್ ಮೆಟ್ಟಿಲೇರಿದ್ದರೂ ವೃದ್ಧನ ಮೇಲೆ ದಬ್ಬಾಳಿಕೆ; ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಹಾಕಿದ ಕಿಡಿಗೇಡಿಗಳು!

Share

ನ್ಯಾಯಾಲಯದಲ್ಲಿದ್ದರೂ ನಿಲ್ಲದ ಮನೆ ಮಾರಾಟ ವಿವಾದ
88ರ ವೃದ್ಧನ ಮೇಲೆ ಭೀಕರ ದೌರ್ಜನ್ಯ
ಟವಲ್ ಬನಿಯನ್ ಮೇಲೆ ಹೊರಹಾಕಿದ ಕಿಡಿಗೇಡಿಗಳು
ಅಸ್ವಸ್ಥ ವೃದ್ಧ ಸದ್ಯ ಬೀಳಗಿ ಆಸ್ಪತ್ರೆಗೆ ದಾಖಲು

ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಮಾನವೀಯತೆ ಮರೆತ ಘಟನೆಯೊಂದು ನಡೆದಿದೆ. ಮನೆಯ ವಿವಾದ ನ್ಯಾಯಾಲಯದಲ್ಲಿದ್ದರೂ ಸಹ, 88 ವರ್ಷದ ವೃದ್ಧನೊಬ್ಬನನ್ನು ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರದಬ್ಬಿದ ಅಮಾನವೀಯ ಘಟನೆ ಸಿದ್ದೇಶ್ವರ ನಗರದಲ್ಲಿ ನಡೆದಿದ್ದು, ಸದ್ಯ ವೃದ್ಧ ಆಸ್ಪತ್ರೆ ಪಾಲಾಗಿದ್ದಾರೆ.

ಬೀಳಗಿಯ ಸಿದ್ದೇಶ್ವರ ನಗರದ ನಿವಾಸಿ ಹುಸೇನಸಾಬ್ ಮುಲ್ಲಾ (88) ಎಂಬುವವರೇ ಈ ದಬ್ಬಾಳಿಕೆಗೆ ಒಳಗಾದ ದುರ್ದೈವಿ. ಇವರು ಮತ್ತು ಶಕುಂತಲಾ ಘೋರ್ಪಡೆ ಎಂಬುವವರು ಸೇರಿ ಈ ಹಿಂದೆ ಮನೆಯನ್ನು ನಿರ್ಮಿಸಿದ್ದರು. ಆದರೆ, ಹುಸೇನಸಾಬ್ ಅವರಿಗೆ ತಿಳಿಯದಂತೆ ಶಕುಂತಲಾ ಅವರು ಈ ಮನೆಯನ್ನು ದುಂಡಪ್ಪ ನರೇಗಲ್ ಎಂಬುವವರಿಗೆ ಮಾರಾಟ ಮಾಡಿದ್ದರು. ಈ ವಿಷಯ ತಿಳಿದ ಹುಸೇನಸಾಬ್ ಅವರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದರು. ಹೀಗಿದ್ದರೂ ಸಹ, ಮನೆ ಖರೀದಿ ಮಾಡಿದ್ದೇವೆ ಎಂಬ ಕಾರಣವೊಡ್ಡಿ ದುಂಡಪ್ಪ ನರೇಗಲ್, ರಾಜು ಸಿಕಳವಾಡಿ ಮತ್ತು ಸಿದ್ದು ಮಳಗಾವಿ ಎಂಬುವವರು ಸೇರಿ ವೃದ್ಧನನ್ನು ಕೇವಲ ಟವಲ್ ಮತ್ತು ಬನಿಯನ್ ಮೇಲೆಯೇ ಮನೆಯಿಂದ ಆಚೆ ತಳ್ಳಿ ವಿಕೃತಿ ಮೆರೆದಿದ್ದಾರೆ.
ಕಿಡಿಗೇಡಿಗಳ ಈ ದಬ್ಬಾಳಿಕೆಯಿಂದ ತೀವ್ರವಾಗಿ ಮನನೊಂದ ಹುಸೇನಸಾಬ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ಬೀಳಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಕಾನೂನು ಕೈಗೆತ್ತಿಕೊಂಡು ವೃದ್ಧನ ಮೇಲೆ ಅಮಾನವೀಯವಾಗಿ ವರ್ತಿಸಿದವರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

Tags:

error: Content is protected !!