bagalkot

ಬಾಗಲಕೋಟೆಯಲ್ಲಿ ಹೆತ್ತಮ್ಮನಿಂದಲೇ ಹಿರಿಯಕ್ಕನ ಚಾಳಿ: ಮೂವರು ಮಕ್ಕಳನ್ನು ನೇಣಿಗೇರಿಸಿ ತಾಯಿ ಆತ್ಮಹತ್ಯೆ ಯತ್ನ!

Share

• ಮನೆ ಬೆಳಗಬೇಕಿದ್ದ ಮೂವರು ಮಕ್ಕಳ ಹತ್ಯೆ
• ಬಾದಾಮಿಯ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ದುರಂತ
• ಕೌಟುಂಬಿಕ ಕಲಹಕ್ಕೆ ಬಲಿಯಾದ ಎಳೆಯ ಜೀವಗಳು
• ಡೀಸೆಲ್ ಕುಡಿದು ಸಾವು-ಬದುಕಿನ ನಡುವೆ ತಾಯಿ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದ ತಾಯಿಯೊಬ್ಬರು ತನ್ನ ಮೂವರು ಕಂದಮ್ಮಗಳನ್ನು ನೇಣಿಗೇರಿಸಿ ಕೊಲೆ ಮಾಡಿ, ಬಳಿಕ ತಾನು ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಇಂದು ಮಧ್ಯಾಹ್ನ ಈ ಹೃದಯವಿದ್ರಾವಕ ಘಟನೆ ಜರುಗಿದೆ. ರೂಪಾ ಹನುಮಂತ ಗೌಡರ (27) ಎಂಬಾಕೆ ತನ್ನ ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಹಾಗೂ ಸುಕ್ಷಿತ್ (2) ಎಂಬ ಮೂವರು ಪುಟ್ಟ ಮಕ್ಕಳನ್ನು ಮನೆಯಲ್ಲಿ ನೇಣು ಹಾಕಿ ಬಲಿ ತೆಗೆದುಕೊಂಡಿದ್ದಾಳೆ. ಕೌಟುಂಬಿಕ ಕಲಹವೇ ಈ ಭೀಕರ ನಿರ್ಧಾರಕ್ಕೆ ಕಾರಣ ಎನ್ನಲಾಗಿದ್ದು, ಮಕ್ಕಳನ್ನು ಕೊಂದ ಬಳಿಕ ತಾಯಿ ತಾನೂ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಘಟನೆ ನಡೆದ ತಕ್ಷಣ ಸ್ಥಳೀಯರು ರೂಪಾಳನ್ನು ರಕ್ಷಿಸಿ ಬಾದಾಮಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತ ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಒಂದೇ ಮನೆಯ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆಯಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Tags:

error: Content is protected !!