Bagalkote

ಬಾಗಲಕೋಟೆದಲ್ಲಿ ನಿಷೇಧಾಜ್ಞೆ ಜಾರಿ; ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಗೆ ಹಿಂದೂ ಮುಖಂಡರ ಪ್ರಶ್ನೆಗಳ ಸುರಿಮಳೆ

Share

• ಮುಧೋಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
• ನಿಷೇಧಾಜ್ಞೆ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ
• ಪೊಲೀಸ್ ಇಲಾಖೆಗೆ ಶಂಕರ್ ಪಾಟೀಲ್ ಪ್ರಶ್ನೆ
• ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಪೊಲೀಸ್ ಸೂಚನೆ

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಶಿವ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದ ಬೆನ್ನಲ್ಲೇ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಈ ನಡುವೆ ಹಿಂದೂ ಮುಖಂಡರು ಪೊಲೀಸ್ ಇಲಾಖೆಯ ಏಕಪಕ್ಷೀಯ ಕ್ರಮದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮುಧೋಳದಲ್ಲಿ ಶಿವಾಜಿ ಮಹಾರಾಜರ ಜಯಂತಿಯ ಮೆರವಣಿಗೆಯ ಮೇಲೆ ಕಲ್ಲು ಮತ್ತು ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ನಗರಸಭೆ ಮತ್ತು ಪಂಚಾಯಿತಿ ವಾಹನಗಳ ಮೂಲಕ ನಗರದಾದ್ಯಂತ ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ಪ್ರಕಟಣೆ ನೀಡುತ್ತಿವೆ. 163ನೇ ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಯಾರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಬಾರದು ಮತ್ತು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುತ್ತಿದೆ.
ಮತ್ತೊಂದೆಡೆ, ಹಿಂದೂ ಜಾಗರಣ ವೇದಿಕೆಯ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷ ಶಂಕರ್ ಪಾಟೀಲ್ ಅವರು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಸೀದಿಯ ಒಳಗಿನಿಂದ ಕಲ್ಲು ತೂರಾಟ ನಡೆದಿದ್ದರೂ ಕೇವಲ ಎಂಟು ಜನರನ್ನು ಮಾತ್ರ ಏಕೆ ಬಂಧಿಸಿದ್ದೀರಿ? ಕಲ್ಲು ಎಸೆದವರನ್ನು ಪೋಷಿಸುತ್ತಿರುವ ಆಡಳಿತ ಮಂಡಳಿಯ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಹಿಂದೂ ಕಾರ್ಯಕರ್ತರ ಮನೆಮನೆಗೆ ನೋಟಿಸ್ ಜಾರಿ ಮಾಡುತ್ತಿರುವ ಪೊಲೀಸರು, ಮಸೀದಿಯೊಳಗೆ ಜನ ಸೇರದಂತೆ ತಡೆಹಿಡಿಯುತ್ತಾರೆಯೇ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಫೆಬ್ರವರಿ 28ರವರೆಗೆ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದಾದ ಮೇಲೆ ನಿಯಮ ಎಲ್ಲರಿಗೂ ಒಂದೇ ಇರಲಿ ಎಂದು ಅವರು ಆಗ್ರಹಿಸಿದ್ದಾರೆ.

Tags:

error: Content is protected !!