BELAGAVI

ರಸ್ತೆ ಸುರಕ್ಷತೆಗೆ ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಖಡಕ್ ವಾರ್ನಿಂಗ್: 200 ಸ್ಪೀಕರ್ ಜಪ್ತಿ, ನಿಯಮ ಉಲ್ಲಂಘಿಸುವ ಇಂಜಿನಿಯರ್‌ಗಳಿಗೂ ಬೀಳಲಿದೆ ಬಿಸಿ!

Share

ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ. ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರ್ಯಾಕ್ಟರ್‌ಗಳಲ್ಲಿ ಅತಿಯಾದ ಶಬ್ದ ಮಾಲಿನ್ಯ ಮಾಡುವವರ ವಿರುದ್ಧ ಹಾಗೂ ಹೆದ್ದಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಬೆಳಗಾವಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಮುಖ್ಯವಾಗಿ ಟ್ರ್ಯಾಕ್ಟರ್‌ಗಳಲ್ಲಿ ಅತಿಯಾದ ಧ್ವನಿ ಬರುವ ಸ್ಪೀಕರ್‌ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡು, ಸುಮಾರು 200 ಸ್ಪೀಕರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳು ಕಡ್ಡಾಯವಾಗಿ ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕು. ಇಲ್ಲವಾದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದರು. ಅಪಘಾತಗಳ ಅಂಕಿಅಂಶ ಹಂಚಿಕೊಂಡ ಎಸ್‌ಪಿ, ಕಳೆದ ಜನವರಿಯಲ್ಲಿ 21 ಅಪಘಾತಗಳಲ್ಲಿ 84 ಮಂದಿ ಮೃತಪಟ್ಟಿದ್ದರು, ಈ ಬಾರಿ ಅಪಘಾತಗಳ ಸಂಖ್ಯೆ 65ಕ್ಕೇರಿದ್ದರೂ ಸಾವಿನ ಸಂಖ್ಯೆ 68ಕ್ಕೆ ಇಳಿಕೆಯಾಗಿದೆ ಎಂದರು. ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಲೇನ್ ಮಾರ್ಕಿಂಗ್ ಇಲ್ಲದಿರುವುದು ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ತಕ್ಷಣ ಮಾರ್ಕಿಂಗ್ ಮಾಡದಿದ್ದರೆ ಸಂಬಂಧಪಟ್ಟ ಇಂಜಿನಿಯರ್‌ಗಳ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ ‘ಡ್ರಿಂಕ್ ಆಂಡ್ ಡ್ರೈವ್’ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾರ್ವಜನಿಕರು ಜವಾಬ್ದಾರಿಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಿದರು.

Tags:

error: Content is protected !!