BELAGAVI

ಬೆಳಗಾವಿ ಸಾಂಬ್ರಾ ಏರ್‌ಪೋರ್ಟ್ ಕನೆಕ್ಟಿವಿಟಿ ಕಡಿತ: ಲಾಭದಲ್ಲಿದ್ದರೂ ಫ್ಲೈಟ್ ಬಂದ್ ಮಾಡಿದ ಏರ್‌ಲೈನ್ಸ್‌ ವಿರುದ್ಧ ಸಂಸತ್ತಿನಲ್ಲಿ ಕಡಾಡಿ ಕಿಡಿ!

Share

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ 13 ನಗರಗಳಿಗೆ ಸಂಪರ್ಕ ಹೊಂದಿದ್ದ ನಿಲ್ದಾಣ, ಈಗ ಕೇವಲ 5 ನಗರಗಳಿಗೆ ಸೀಮಿತವಾಗಿದ್ದರ ವಿರುದ್ಧ ಸಂಸತ್ತಿನಲ್ಲಿ ದನಿ ಎತ್ತಲಾಗಿದೆ. ಲಾಭದಲ್ಲಿದ್ದರೂ ಹಾರಾಟ ನಿಲ್ಲಿಸಿದ ಖಾಸಗಿ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಆಗ್ರಹಿಸಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣವು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಭಾಗದಲ್ಲಿದ್ದು, ರಕ್ಷಣಾ ಪಡೆಗಳ ಪ್ರಮುಖ ಕೇಂದ್ರವಾಗಿದೆ. ಕೇಂದ್ರ ಸರ್ಕಾರವು 262 ಕೋಟಿ ರೂ. ವೆಚ್ಚದಲ್ಲಿ ಹೊಸ ಟರ್ಮಿನಲ್ ನಿರ್ಮಿಸುತ್ತಿದ್ದರೂ, ವಿಮಾನಯಾನ ಸಂಸ್ಥೆಗಳು ಮಾತ್ರ ಹಾರಾಟ ನಡೆಸಲು ಹಿಂದೇಟು ಹಾಕುತ್ತಿವೆ. ‘ಉಡಾನ್’ ಯೋಜನೆಯಡಿ ಸಬ್ಸಿಡಿ ಸಿಗುವವರೆಗೂ 13 ನಗರಗಳಿಗೆ ಹಾರಾಟ ನಡೆಸುತ್ತಿದ್ದ ಸಂಸ್ಥೆಗಳು, ಈಗ ಸಬ್ಸಿಡಿ ಅವಧಿ ಮುಗಿಯುತ್ತಿದ್ದಂತೆ ಕನೆಕ್ಟಿವಿಟಿಯನ್ನು ಕೇವಲ 5 ನಗರಗಳಿಗೆ ಇಳಿಸಿವೆ. ಈ ನಡೆ ಬೆಳಗಾವಿಯ ಕೈಗಾರಿಕಾ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ದೊಡ್ಡ ಹೊಡೆತ ನೀಡಿದೆ ಎಂದು ಸದನದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಬೆಳಗಾವಿಯಿಂದ ಮುಂಬೈ, ದೆಹಲಿ ಮತ್ತು ಬೆಂಗಳೂರು ಮಾರ್ಗಗಳಲ್ಲಿ ಶೇ. 85 ರಿಂದ 95 ರಷ್ಟು ಪ್ರಯಾಣಿಕರು ಲಭ್ಯವಿದ್ದಾರೆ. ಲಾಭದಾಯಕವಾಗಿದ್ದರೂ ಸಹ ವಿಮಾನಯಾನ ಸಂಸ್ಥೆಗಳು ಹಾರಾಟ ನಿಲ್ಲಿಸಿರುವುದು ವಿಪರ್ಯಾಸ. 2024-25ರಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 9ರಷ್ಟು ಏರಿಕೆಯಾಗಿದೆ. ಹೀಗಾಗಿ, ನಾಗರಿಕ ವಿಮಾನಯಾನ ಸಚಿವಾಲಯವು ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣವೇ ಮುಂಬೈ, ಪುಣೆ, ಚೆನ್ನೈ ಹಾಗೂ ಜೈಪುರ ನಗರಗಳಿಗೆ ವಿಮಾನ ಸೇವೆ ಮರುಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

Tags:

error: Content is protected !!