ಅಕ್ರಮ ಚಟುವಟಿಕೆಗಳ ವಿರುದ್ಧ ಬೆಳಗಾವಿ ಪೊಲೀಸರು ಸಮರ ಸಾರಿದ್ದಾರೆ. ಉದ್ಯಮಬಾಗ ಹಾಗೂ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಅಕ್ರಮ ಮದ್ಯ ಮಾರಾಟಗಾರ ಮತ್ತು ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಸಾವಿರಾರು ರೂಪಾಯಿ ಮೌಲ್ಯದ ಮದ್ಯ ಹಾಗೂ ನಗದನ್ನು ಜಪ್ತಿ ಮಾಡಲಾಗಿದೆ.

ಉದ್ಯಮಬಾಗ ಠಾಣೆಯ ಪಿಎಸ್‌ಐ ಕಿರಣ್ ಸಿ. ಹೊನಕಟ್ಟಿ ನೇತೃತ್ವದ ತಂಡವು ಮಜಗಾವಿಯ ಅರುಣ ಇಂಜಿನಿಯರಿಂಗ್ ಫ್ಯಾಕ್ಟರಿ ಬಳಿ ದಾಳಿ ನಡೆಸಿ, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪರಮೇಶ್ವರ ದೇವಪ್ಪ ನಾಯಕ (50) ಎಂಬಾತನನ್ನು ಬಂಧಿಸಿದೆ. ಈತನಿಂದ ಸುಮಾರು 4,750 ರೂ. ಮೌಲ್ಯದ 12 ಲೀಟರ್ ವಿದೇಶಿ ಮದ್ಯದ ಬಾಟಲಿಗಳು ಹಾಗೂ 3,360 ರೂ. ನಗದನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಉದ್ಯಮಬಾಗ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್‌ಐ ಲಕ್ಕಪ್ಪ ಎಸ್. ಜೋಡಟ್ಟಿ ಅವರ ತಂಡವು ರಾಜಹಂಸಗಡ ಕೋಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡುತ್ತಿದ್ದ ಸಾತೇರಿ ಮಹಾದೇವ ಓವುಳಕರ (46) ಎಂಬುವವರನ್ನು ವಶಕ್ಕೆ ಪಡೆದಿದೆ. ಒಟ್ಟಾರೆಯಾಗಿ ಎರಡು ಪ್ರಕರಣಗಳಲ್ಲಿ 8,110 ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾದ ಈ ತಂಡಗಳ ಕಾರ್ಯಕ್ಷಮತೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.
