Ramdurg

ಬೆಳಗಾವಿ ಡಿಸಿಸಿ ಬ್ಯಾಂಕ್ ವಾರ್: ಕತ್ತಿ-ಸವದಿ ಬಣದ ಭದ್ರಕೋಟೆಗೆ ಬಾಲಚಂದ್ರ ಜಾರಕಿಹೊಳಿ ಎಂಟ್ರಿ; ರಾಮದುರ್ಗದಲ್ಲಿ ರಂಗೇರಿದ ‘ಬ್ಯಾಂಕ್’ ರಾಜಕೀಯ!

Share

ಬೆಳಗಾವಿ ರಾಜಕೀಯದ ‘ಪವರ್ ಸೆಂಟರ್’ ಎಂದೇ ಕರೆಯಲ್ಪಡುವ ಡಿಸಿಸಿ ಬ್ಯಾಂಕ್ ಅಖಾಡದಲ್ಲಿ ಈಗ ಹೊಸ ಸಂಚಲನ ಶುರುವಾಗಿದೆ. ರಮೇಶ್ ಕತ್ತಿ ಮತ್ತು ಲಕ್ಷ್ಮಣ ಸವದಿ ಆಪ್ತರಿರುವ ರಾಮದುರ್ಗ ಕ್ಷೇತ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದು, ಹಾಲಿ ಹಾಗೂ ಮಾಜಿ ಶಾಸಕರ ಎದೆಯಲ್ಲಿ ನಡುಕ ಶುರುವಾಗುವಂತೆ ಮಾಡಿದ್ದಾರೆ.

ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಡಿಸಿಸಿ ಬ್ಯಾಂಕ್ ಜಿದ್ದಾಜಿದ್ದಿನ ರಾಜಕೀಯ ಈಗ ರಾಮದುರ್ಗ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದೆ. ಹುಕ್ಕೇರಿ ಮತ್ತು ಅಥಣಿ ಬಳಿಕ ಈಗ ರಾಮದುರ್ಗದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ನೇತೃತ್ವದ ಟೀಮ್ ಅಖಾಡಕ್ಕಿಳಿದಿದೆ. ರಾಮದುರ್ಗದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಸದಸ್ಯರ ಮಹತ್ವದ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ, ಸ್ಥಳೀಯ ನಾಯಕರ ವಿರುದ್ಧ ನೇರವಾಗಿಯೇ ಗುಡುಗಿದ್ದಾರೆ. “ನಾವು ಎಂಟ್ರಿ ಕೊಟ್ಟಿರೋದರಿಂದ ಇವತ್ತಿನಿಂದ ಅವರಿಗೆ ಟೆನ್ಷನ್ ಆರಂಭವಾಗಲಿದೆ, ಇನ್ನು ಮುಂದೆ ಅವರಿಗೆ ನಿದ್ದೆ ಹತ್ತುವುದಿಲ್ಲ” ಎಂದು ಟಾಂಗ್ ನೀಡುವ ಮೂಲಕ ಸಮರ ಸಾರಿದ್ದಾರೆ.

ಈ ಹಿಂದೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಅಶೋಕ ಪಟ್ಟಣ ಹಾಗೂ ಬಿಜೆಪಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಒಂದಾಗಿ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿದ್ದರು. ಲಕ್ಷ್ಮಣ ಸವದಿ ಹಾಗೂ ರಮೇಶ್ ಕತ್ತಿ ಬಣದಲ್ಲಿ ಗುರುತಿಸಿಕೊಂಡಿರುವ ಈ ಇಬ್ಬರು ನಾಯಕರ ವಿರುದ್ಧ ಈಗ ಜಾರಕಿಹೊಳಿ ಬಣ ರಣತಂತ್ರ ರೂಪಿಸಿದೆ. “ನಾವು ಹೊರಗಿನವರಲ್ಲ, ನಿಮ್ಮವರೇ. ರೈತರು ಹಾಗೂ ನೇಕಾರರ ಹಿತಕ್ಕಾಗಿ ನಾವು ಕೆಲಸ ಮಾಡುತ್ತೇವೆ” ಎಂದು ಭರವಸೆ ನೀಡಿರುವ ಬಾಲಚಂದ್ರ ಜಾರಕಿಹೊಳಿ, ರಾಮದುರ್ಗದ ರಾಜಕೀಯ ಸಮೀಕರಣವನ್ನೇ ಬದಲಿಸಲು ಮುಂದಾಗಿದ್ದಾರೆ.

Tags:

error: Content is protected !!