Belagavi

ಬೆಳಗಾವಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಮಟಕಾ ಅಡ್ಡೆ, ಗಾಂಜಾ ಮತ್ತು ಅಕ್ರಮ ಮದ್ಯಪಾನಿಗಳ ಮೇಲೆ ದಾಳಿ – 8 ಮಂದಿ ವಶಕ್ಕೆ

Share

ಬೆಳಗಾವಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಮಟಕಾ ಜುಗಾರಿ, ಮಾದಕ ವಸ್ತುಗಳ ಸೇವನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದವರ ವಿರುದ್ಧ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 8 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಅಕ್ರಮ ತಡೆಗೆ ಸಾರ್ವಜನಿಕರ ಸಹಕಾರವನ್ನು ಪೊಲೀಸರು ಕೋರಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.”

ಬೆಳಗಾವಿ ನಗರದ ತಿಲಕವಾಡಿ, ಗ್ರಾಮೀಣ, ಉದ್ಯಮಬಾಗ ಮತ್ತು ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ತಿಲಕವಾಡಿ ಠಾಣೆಯ ಪಿಎಸ್‌ಐ ಪಿ.ಜಿ. ಡೊಳ್ಳಿ ನೇತೃತ್ವದಲ್ಲಿ ಸಮೃದ್ಧಿ ಕಾಲೋನಿಯಲ್ಲಿ ಮಟಕಾ ಆಡಿಸುತ್ತಿದ್ದ ವಿನೋದ ಅಶೋಕ ಹೊಸುರಕರ ಎಂಬಾತನನ್ನು ಬಂಧಿಸಲಾಗಿದೆ. ಇನ್ನು ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯ ಮಚ್ಚ ಗ್ರಾಮದ ಬಳಿ ಗಾಂಜಾ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಶಿವಾನಂದ ಬೊರಕ್ಕನವರ ಎಂಬಾತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಂಧಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದರ ವಿರುದ್ಧವೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಉದ್ಯಮಬಾಗ, ಖಡೇಬಜಾರ್ ಹಾಗೂ ಮಾರಿಹಾಳ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಮದ್ಯ ಸೇವಿಸುತ್ತಿದ್ದ ಸುಮಾರು ಆರು ಜನರನ್ನು ಬಂಧಿಸಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಓಸಿ ಚೀಟಿಗಳು ಹಾಗೂ ಮದ್ಯದ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರು ಈ ಯಶಸ್ವಿ ದಾಳಿ ನಡೆಸಿದ ಅಧಿಕಾರಿಗಳನ್ನು ಶ್ಲಾಘಿಸಿದ್ದು, ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Tags:

error: Content is protected !!