ಬೆಳಗಾವಿ ನಗರದ ಕ್ಯಾಂಪ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಆತನಿಂದ ₹1,18,000 ಮೌಲ್ಯದ ಮೂರು ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಗಣೇಶಪುರದ ಗಂಗಾನಗರ ನಿವಾಸಿ ಕಿಶೋರ ಪರಶುರಾಮ ಸಿಂಗನಗೂಡಿ (25) ಬಂಧಿತ ಆರೋಪಿ. ಕಳೆದ ಅಕ್ಟೋಬರ್ 25 ರಂದು ಬಡಾಲ್ ಅಂಕಲಗಿಯ ವಿರೇಶ ಗಣಾಚಾರಿ ಎಂಬುವವರು ನೀಡಿದ ಬೈಕ್ ಕಳ್ಳತನದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು, ವಿಶೇಷ ತಂಡ ರಚಿಸಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಹಾಗೂ ಡಿಸಿಪಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕ್ಯಾಂಪ್ ಇನ್ಸ್‌ಪೆಕ್ಟರ್ ಆನಂದ ಒನಕುದ್ರೆ ಮತ್ತು ಪಿಎಸ್‌ಐ ಆರ್.ಐ. ಸನದಿ ಅವರ ನೇತೃತ್ವದ ತಂಡ ಭಾಗವಹಿಸಿತ್ತು. ಬಂಧಿತನಿಂದ ಬಜಾಜ್ ಪಲ್ಸರ್, ಹೋಂಡಾ ಆಕ್ಟಿವಾ ಹಾಗೂ ಸ್ಪ್ಲೆಂಡರ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ದಕ್ಷತೆಯಿಂದ ಕಾರ್ಯನಿರ್ವಹಿಸಿ ಕಳ್ಳತನ ಪ್ರಕರಣವನ್ನು ಬೇಧಿಸಿದ ತಂಡಕ್ಕೆ ಪೊಲೀಸ್ ಆಯುಕ್ತರು ಅಭಿನಂದನೆ ಸಲ್ಲಿಸಿದ್ದಾರೆ.
