ಹುಬ್ಬಳ್ಳಿಯಲ್ಲಿ ನಡೆದ ನೈಋತ್ಯ ರೈಲ್ವೆಯ ಮಹತ್ವದ ಸಭೆಯಲ್ಲಿ ಉತ್ತರ ಕರ್ನಾಟಕದ ರೈಲ್ವೆ ಬೇಡಿಕೆಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿದೆ. ಹೊಸ ರೈಲು ಮಾರ್ಗ ಹಾಗೂ ರೈಲುಗಳ ವಿಸ್ತರಣೆಗೆ ಆಗ್ರಹಿಸಿ ಮನವಿ ಸಲ್ಲಿಸುವ ವೇಳೆ, ಅಧಿಕಾರಿಗಳ ಬೇಜವಾಬ್ದಾರಿ ಉತ್ತರಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ.


ಹುಬ್ಬಳ್ಳಿ ನಗರದಲ್ಲಿರುವ ಚಾಲುಕ್ಯ ರೈಲ್ವೆ ಇನಸ್ಟಿಟ್ಯೂಟ್ ಸಭಾಭವನದಲ್ಲಿ ಮಂಗಳವಾರ ಸೌತ್ ವೆಸ್ಟರ್ನ್ ರೈಲ್ವೆಸ್ ನ 25ನೇ ವಲಯ ರೈಲ್ವೆ ಬಳಕೆದಾರರ ಸಮಿತಿ ಸಭೆ ಹಮ್ಮಿಕೊಳ್ಳಲಾಗಿತ್ತು . ಈ ಸಭೆಯಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಧ್ಯಕ್ಷರಾದ ಕುತ್ಬುದ್ದಿನ್ ಕಾಜಿಯವರು ಪಾಲ್ಗೊಂಡು ಉತ್ತರ ಕರ್ನಾಟಕದ ವಿವಿಧ ರೈಲ್ವೆ ಬೇಡಿಕೆ ಹಾಗೂ ನೂತನ ರೈಲ್ವೆ ಮಾರ್ಗಗಳ ಕುರಿತು ಮಾನ್ಯ ಮಹಾ ವ್ಯವಸ್ಥಾಪಕರಾದ ಪಿ ಅನಂತ ಅವರಿಗೆ ಮನವಿ ಸಲ್ಲಿಸಿದರು.

ಬಹು ದಿನಗಳ ಬೇಡಿಕೆಯಾದ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಬೇಕು, ಬಸವ ಎಕ್ಸಪ್ರೆಸ್ ರೈಲನ್ನು ಲೋಕಾಪೂರವರೆಗೆ ವಿಸ್ತರಿಸಬೇಕು , ವಿಜಯಪುರ- ಬಾಗಲಕೋಟೆ ಮಾರ್ಗದಲ್ಲಿ ತಿರುಪತಿಗೆ ನೂತನ ರೈಲು ಪ್ರಾರಂಭಿಸಬೇಕು, ವಿಜಯಪುರದಿಂದ ಬಾಗಲಕೋಟೆ ಗದಗ ಹೊಸಪೇಠ ಬಳ್ಳಾರಿ ಮಾರ್ಗವಾಗಿ ಗುಂಠಕಲ್ಲವರೆಗೆ ನೂತನ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು, ಹುಬ್ಬಳ್ಳಿ – ಹ.ನಿಜಾಮುದ್ದೀನ್ ಎಕ್ಸಪ್ರೆಸ್, ಮೈಸೂರು-ಸಾಯಿನಗರ (ಶಿರಡಿ) , ಯಶ್ವಂತಪುರ – ಬಿಕಾನೇರ ಈ ರೈಲುಗಳನ್ನು ದಿನನಿತ್ಯ ಸಂಚರಿಸುವಂತೆ ಮಾಡಬೇಕು, ರಾಯಚೂರು – ವಿಜಯಪುರ ರೈಲನ್ನು ಗದಗ ವರೆಗೆ ವಿಸ್ತರಿಸಬೇಕು, ಹೈದರಾಬಾದ್-ವಿಜಯಪುರ ರೈಲನ್ನು ಗದಗ ವರೆಗೆ ವಿಸ್ತರಿಸಬೇಕು, ಮುಂಬೈ – ಬೆಂಗಳೂರು ಸೂಪರ್ ಫಾಸ್ಟ್ ರೈಲನ್ನು ವಿಜಯಪುರ-ಬಾಗಲಕೋಟೆ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಬಾಗಲಕೋಟೆ-ಕುಡಚಿ ಕಾಮಗಾರಿಯು ಲೋಕಾಪೂರವರೆಗೆ ಮುಕ್ತಾಯವಾಗಿದ್ದು ಭದ್ರತಾ ಸಮೀಕ್ಷೆಯು ಸಹ ಆಗಿದೆ. ಆದರೆ ಇಲ್ಲಿ ರೈಲುಗಳ ಸಂಚಾರವಿಲ್ಲದೆ ನಿಲ್ದಾಣಗಳು ಹಾಳಾಗುತ್ತಿರುವುದರಿಂದ ಬಾಗಲಕೋಟೆ-ಲೋಕಾಪೂರ ವರೆಗೆ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕೆಂದು ಕುತ್ಬುದ್ದಿನ್ ಕಾಜಿಯವರು ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಿದಾಗ ಅಧಿಕಾರಿಗಳು ಅಲ್ಲಿನ ಜನರು ರೈಲು ಹತ್ತಲ್ಲವೆಂದು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳಲು ಪ್ರಯತ್ನಿಸಿದಾಗ ಮಾನ್ಯ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ರೈಲ್ವೆ ಅಧಿಕಾರಿಗಳ ನಡೆಗೆ ಗರಂ ಆಗಿ ನೀವು ಆ ಭಾಗದಲ್ಲಿ ಇನ್ನೂ ರೈಲು ಪ್ರಾರಂಭಿಸಿಯೇ ಇಲ್ಲ. ಮತ್ತೆ ಜನರು ರೈಲು ಹತ್ತಲ್ಲವೆಂದು ಹೇಗೆ ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಧ್ಯಕ್ಷರಾದ ಕುತ್ಬುದ್ದಿನ್ ಕಾಜಿ, ಮಹೇಂದ್ರ ಸಿಂಗವಿ , ಸುಭಾಸ ಶಿರ್ಬುರ, ರಾಜಶೇಖರ ಮೇಣಶಿನಕಾಯಿ, ಬಾಬಾಜಾನ ಮುಧೋಳ, ಮೈನುದ್ದಿನ್ ಖಾಜಿ, ಎಂ ಕೆ ಯಾದವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
