ಬೆಳಗಾವಿಯ ಸೆಕ್ಟರ್ ನಂ. 9 ರಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಬಸವೇಶ್ವರ ಆರ್ಟ್ ಗ್ಯಾಲರಿ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದ್ದು, ಇಂದು ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.


ಬೆಳಗಾವಿಯ ಸೆಕ್ಟರ್ ನಂ. 9 ರಲ್ಲಿರುವ ಶ್ರೀ ಬಸವೇಶ್ವರ ಆರ್ಟ್ ಗ್ಯಾಲರಿಯು ಕಳೆದ 7-8 ವರ್ಷಗಳಿಂದ ನಿರ್ವಹಣೆಯಿಲ್ಲದೆ ಅಕ್ಷರಶಃ ಭೂತ ಬಂಗಲೆಯಂತಾಗಿದೆ. ಈ ಹಿಂದೆ ಫಿರೋಜ್ ಸೇಠ್ ಅವರು ಶಾಸಕರಾಗಿದ್ದಾಗ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಗ್ರಂಥಾಲಯ ನಿರ್ಮಿಸುವ ಉದ್ದೇಶದಿಂದ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಕಟ್ಟಡವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವುದನ್ನು ಖಂಡಿಸಿ, ಇಂದು ಜಗಜ್ಯೋತಿ ಬಸವೇಶ್ವರ ಫೌಂಡೇಶನ್ ವತಿಯಿಂದ ಮಾಜಿ ನಗರಸೇವಕ ದಿನೇಶ್ ನಾಶಿಪುಡಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ನಾಶಿಪುಡಿ ಅವರು, ಮಹಾನಗರ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ 10 ದಿನದೊಳಗೆ ಪಾಲಿಕೆಯ ಅಧಿಕಾರಿಗಳು ಈ ಕಟ್ಟಡವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸಾರ್ವಜನಿಕರ ಸದುಪಯೋಗಕ್ಕೆ ಮುಕ್ತಗೊಳಿಸಬೇಕು ಎಂದು ಗಡುವು ನೀಡಿದರು. ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ತಾವೇ ಸ್ವಂತ ಖರ್ಚಿನಲ್ಲಿ ದುರಸ್ತಿ ಕಾರ್ಯ ಕೈಗೊಂಡು ಕಟ್ಟಡವನ್ನು ವಶಕ್ಕೆ ಪಡೆಯುವುದಾಗಿ ಎಚ್ಚರಿಸಿದರು. ಸಮಾಜದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಈ ಗ್ಯಾಲರಿಯನ್ನು ಪುನಶ್ಚೇತನಗೊಳಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
