Bagalkot

ಬನಶಂಕರಿ ಜಾತ್ರೆಯ ಹಣ ಲೂಟಿ: ಚೊಳಚಗುಡ್ಡ ಗ್ರಾಮ ಪಂಚಾಯ್ತಿ ಸೆಕ್ರೆಟರಿ ಅಮಾನತು!!!

Share

ಬಾಗಲಕೋಟೆ ಜಿಲ್ಲೆಯ ಸುಪ್ರಸಿದ್ಧ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ಹಣದಲ್ಲೂ ಈಗ ಕೈಚಳಕ ನಡೆದಿದೆ. ಭಕ್ತರು ನೀಡಿದ ತೆರಿಗೆ ಹಾಗೂ ಜಾತ್ರಾ ನಿಧಿಯಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ಅಕ್ರಮವಾಗಿ ಲಪಟಾಯಿಸಿದ ಆರೋಪದ ಮೇಲೆ ಚೊಳಚಗುಡ್ಡ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯ್ತಿ ಆದೇಶ ಹೊರಡಿಸಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಐತಿಹಾಸಿಕ ಬನಶಂಕರಿ ದೇವಿ ಜಾತ್ರಾ ಮಹೋತ್ಸವದಲ್ಲಿ ನಡೆದಿದೆ ಎನ್ನಲಾದ ಬೃಹತ್ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ, ಚೊಳಚಗುಡ್ಡ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ವೈ.ವೈ. ಸ್ವಾತನವರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. 2024ರಲ್ಲಿ ನಡೆದಿದ್ದ ಜಾತ್ರಾ ಮಹೋತ್ಸವದಲ್ಲಿ ನಿಯಮಬಾಹಿರವಾಗಿ ಹಣ ಖರ್ಚು ಮಾಡಿರುವ ಹಾಗೂ ದಾಖಲೆಗಳಲ್ಲಿ ಭಾರಿ ವ್ಯತ್ಯಾಸ ಎಸಗಿರುವ ಗಂಭೀರ ಆರೋಪ ಇವರ ಮೇಲಿದೆ.

ತನಿಖೆಯ ವೇಳೆ, ಜಾತ್ರೆಗೆ ಸಂಬಂಧಿಸಿದ ತೆರಿಗೆ ಹಣವನ್ನು ಡಿಜಿಟಲ್ ರಶೀದಿ ನೀಡುವ ಬದಲು ಮ್ಯಾನುವಲ್ ರಶೀದಿ ನೀಡಿ ಸಂಗ್ರಹಿಸಲಾಗಿತ್ತು. ಅಲ್ಲದೆ, ಈ ಹಣವನ್ನು ಸರ್ಕಾರಿ ಖಾತೆಗೆ ಜಮೆ ಮಾಡುವ ಬದಲು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ. ಬಾದಾಮಿ ತಾಲೂಕು ಪಂಚಾಯ್ತಿ ಇಓ ನೀಡಿದ ವರದಿಯನ್ನು ಆಧರಿಸಿ, ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ. ದೇವಸ್ಥಾನದ ಪವಿತ್ರ ಜಾತ್ರೆಯ ಹಣದಲ್ಲೂ ಕೈಹಾಕಿದ ಅಧಿಕಾರಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Tags:

error: Content is protected !!