ಬಾಗಲಕೋಟೆಯಲ್ಲಿ ಶಿವಜಯಂತಿ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟದ ಘಟನೆ ಈಗ ಜಿಲ್ಲೆಯಾದ್ಯಂತ ಕಿಚ್ಚು ಹಚ್ಚಿದೆ. ಈ ಕೃತ್ಯವನ್ನು ಖಂಡಿಸಿ ಮುಧೋಳ ನಗರದಲ್ಲಿ ಇಂದು ವಿವಿಧ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಘಟನೆಯನ್ನು ಖಂಡಿಸಿ ಮುಧೋಳ ನಗರದಲ್ಲಿಂದು ಪ್ರತಿಭಟನೆಯ ಬಿಸಿ ಏರಿತ್ತು. ನಗರದ ಪ್ರಮುಖ ವೃತ್ತವಾದ ಛತ್ರಪತಿ ಶಿವಾಜಿ ಮಹಾರಾಜ್ ಸರ್ಕಲ್‌ನಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಕಿಡಿಗೇಡಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ, ಇಂತಹ ಅಹಿತಕರ ಘಟನೆಗಳು ಸಮಾಜದ ಶಾಂತಿಯನ್ನು ಕದಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯ ಭಾಗವಾಗಿ ಮುಧೋಳದ ಶಿವಾಜಿ ವೃತ್ತದಲ್ಲಿ ಪ್ರತಿಭಟನಾಕಾರರು ಬೃಹತ್ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. “ಶಿವಜಯಂತಿಯಂತಹ ಪವಿತ್ರ ಆಚರಣೆಯ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಈ ಘಟನೆಯ ಹಿಂದೆ ಇರುವ ಮಾಸ್ಟರ್‌ಮೈಂಡ್‌ಗಳನ್ನು ತಕ್ಷಣ ಬಂಧಿಸಬೇಕು” ಎಂದು ಆಗ್ರಹಿಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
