ಬಾಗಲಕೋಟೆಯಲ್ಲಿ ಕಲ್ಲು ತೂರಾಟದ ಕಿಚ್ಚು ಆರುವ ಮೊದಲೇ ಮತ್ತೊಂದು ವಿವಾದಕ್ಕೆ ಕಿಡಿ ಹತ್ತಿಕೊಂಡಿದೆ. ಪೊಲೀಸರ ಲಾಠಿ ಏಟಿಗೆ ಹೆದರಿ ಓಡುವಾಗ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನೊಬ್ಬನ ಕೈ ಮುರಿದಿದ್ದು, ಪೊಲೀಸರೇ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯುವಕ ಗಂಭೀರ ಆರೋಪ ಮಾಡಿದ್ದಾನೆ. ಸದ್ಯ ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ…”


ಬಾಗಲಕೋಟೆ ನಗರದಲ್ಲಿ ನಡೆದ ಕಲ್ಲು ತೂರಾಟದ ಪ್ರಕರಣದ ಬೆನ್ನಲ್ಲೇ, ಪೊಲೀಸರ ಹಲ್ಲೆಯಿಂದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನೊಬ್ಬ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಹಳೆ ಕೃಷ್ಣ ಟಾಕೀಸ್ ಸಮೀಪದ ಅಂಬೇಡ್ಕರ್ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಅಶೋಕ ಬಾರೆಕೇರ ಎಂಬ ಯುವಕನ ಕೈ ಮೂಳೆ ಮುರಿದಿದೆ. ಪೊಲೀಸರ ಲಾಠಿ ಪ್ರಹಾರಕ್ಕೆ ಹೆದರಿ ಓಡುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಗಾಯಾಳು ಯುವಕನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ, ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸುಮಾರು 6 ಜನ ಪೊಲೀಸರು ನನ್ನನ್ನು ಸುತ್ತುವರಿದು ನಿಂದಿಸಿದ್ದಾರೆ. ಮಹಾಂತೇಶ ಮತ್ತು ರಾಜೇಶ್ ಬಕ್ಷಿ ಎಂಬ ಪೊಲೀಸರು ನನಗೆ ಹೊಡೆದು ದೌರ್ಜನ್ಯ ಎಸಗಿದ್ದಾರೆ,” ಎಂದು ಯುವಕ ದೂರಿದ್ದಾನೆ. ಪೊಲೀಸರ ಭಯಕ್ಕೆ ಹೆದರಿ ಓಡಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರಕರಣವು ಬಾಗಲಕೋಟೆಯಲ್ಲಿ ಸಂಚಲನ ಮೂಡಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಭೇಟಿ ನೀಡಿ ಕುಶಲೋಪರಿಯನ್ನು ವಿಚಾರಿಸಿದ್ದಾರೆ.
