ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಅಕ್ವಾಟಿಕ್ ಸೆಂಟರ್‌ನಲ್ಲಿ ಫೆಬ್ರವರಿ 20 ರಿಂದ 22 ರವರೆಗೆ ನಡೆದ ‘ಪ್ಯಾರಾ ವರ್ಲ್ಡ್ ಸಿರೀಸ್ – 2026’ ಜಾಗತಿಕ ಈಜು ಸ್ಪರ್ಧೆಯಲ್ಲಿ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಸ್ವತಿಕ್ ನಾರಾಯಣ ಪಾಟೀಲ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ವಿಶ್ವದ ವಿವಿಧ ದೇಶಗಳ ನೂರಾರು ದಿವ್ಯಾಂಗ ಈಜುಪಟುಗಳು ಭಾಗವಹಿಸಿದ್ದ ಈ ಕೂಟದಲ್ಲಿ, ಭಾರತವನ್ನು ಪ್ರತಿನಿಧಿಸಿದ್ದ ಸ್ವತಿಕ್ 400 ಮೀಟರ್ ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಸಾಧನೆಯ ಮೂಲಕ ಅವರು ಅಂತರಾಷ್ಟ್ರೀಯ ವೇದಿಕೆಯಲ್ಲಿ ಕುಂದಾನಗರಿಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಕಳೆದ 13 ವರ್ಷಗಳಿಂದ ಬೆಳಗಾವಿಯ ಜೆಎನ್ಎಂಸಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ಸ್ವತಿಕ್, ಸ್ವಿಮ್ಮರ್ಸ್ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಜಲತರಣ ಗುರು ಉಮೇಶ್ ಕಳಗಟಗಿ ಅವರ ಮಾರ್ಗದರ್ಶನದಲ್ಲಿ ಅಕ್ಷಯ್ ಶೇರೆಗಾರ್, ಅಜಿಂಕ್ಯ ಮೆಂಡಕೆ ಸೇರಿದಂತೆ ತರಬೇತುದಾರರ ತಂಡದಲ್ಲಿ ಇವರು ಪಳಗುತ್ತಿದ್ದಾರೆ. ಈವರೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 33 ಚಿನ್ನ, 7 ಬೆಳ್ಳಿ ಹಾಗೂ 2 ಕಂಚು ಸೇರಿದಂತೆ 42 ಪದಕಗಳನ್ನು ಗೆದ್ದಿರುವ ಇವರ ಸಾಧನೆಯ ಮುಕುಟಕ್ಕೆ ಈಗ ಜಾಗತಿಕ ಮಟ್ಟದ ಮತ್ತೊಂದು ಬೆಳ್ಳಿ ಪದಕ ಸೇರ್ಪಡೆಯಾಗಿದೆ. ಈ ಯಶಸ್ವಿ ಸಾಧನೆಗೆ ಕ್ರೀಡಾ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
