ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಹುಚ್ಚಾಟ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ. ಸುಮಾರು ಅರ್ಧ ಗಂಟೆಗಳ ಕಾಲ ಟವರ್ ತುದಿಯಲ್ಲಿ ನಿಂತು ಈತ ನಡೆಸಿದ ಸರ್ಕಸ್ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿತ್ತು.

ಆಲಗೂರು ಗ್ರಾಮದ ನಿವಾಸಿ ಅರ್ಜುನ್ ನಾಟಿಕಾರ್ ಎಂಬ ವ್ಯಕ್ತಿಯೇ ಮೊಬೈಲ್ ಟವರ್ ಏರಿ ಈ ಹೈಡ್ರಾಮಾ ಸೃಷ್ಟಿಸಿದ ಭೂಪ. ಇಂದು ಸಂಜೆ ಸುಮಾರು 5:30ರ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ಅರ್ಜುನ್, ಏಕಾಏಕಿ ಗ್ರಾಮದ ಮೊಬೈಲ್ ಟವರ್ ಏರಿದ್ದಾನೆ. ಟವರ್‌ನ ತುತ್ತತುದಿಗೆ ತಲುಪಿದ ಈತ, ಅಲ್ಲಿ ನಿಂತು ಕೆಳಗಿದ್ದವರಿಗೆ ಕೈ ಮುಗಿಯುತ್ತಾ, ಮೊಬೈಲ್ ಹಿಡಿದು ವಿಚಿತ್ರವಾಗಿ ಫೋಸ್ ನೀಡುತ್ತಿದ್ದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಸಣ್ಣ ತಪ್ಪಾದರೂ ಪ್ರಾಣಕ್ಕೆ ಕುತ್ತು ಬರುವ ಅಪಾಯವಿದ್ದರೂ ಲೆಕ್ಕಿಸದೆ ಅರ್ಜುನ ತನ್ನ ಹುಚ್ಚಾಟ ಮುಂದುವರಿಸಿದ್ದ.
ಇಷ್ಟಕ್ಕೇ ನಿಲ್ಲದ ಈತನ ಪುಂಡಾಟಿಕೆ, ಟವರ್ ಮೇಲೆ ನಿಂತೇ ಕೆಳಗಿದ್ದವರಿಗೆ ಫೋನ್ ಮಾಡಿ ಮಾತನಾಡುತ್ತಿದ್ದದ್ದು ನೋಡುಗರಿಗೆ ಆಶ್ಚರ್ಯ ಮೂಡಿಸಿತ್ತು. ಸುಮಾರು 30 ನಿಮಿಷಗಳ ಕಾಲ ಟವರ್ ಮೇಲೆಯೇ ಬೀಡುಬಿಟ್ಟಿದ್ದ ಈತನನ್ನು ಕೆಳಗೆ ಇಳಿಸಲು ಗ್ರಾಮಸ್ಥರು ಹರಸಾಹಸ ಪಟ್ಟರು. ಕೊನೆಗೆ ಸಮಾಧಾನಪಡಿಸಿ, ಫೋನ್‌ನಲ್ಲಿ ಮಾತುಕತೆ ನಡೆಸಿದ ಬಳಿಕ ಈತ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾನೆ. ಸದ್ಯ ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಮದ್ಯ ವ್ಯಸನಿಯ ಈ ಹುಚ್ಚಾಟಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
