BELAGAVI

ಮಹಿಳಾ ಸುರಕ್ಷತೆಗೆ ‘ಅಕ್ಕ ಪಡೆ’ ಕವಚ: ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ

Share

ಮಹಿಳಾ ಸುರಕ್ಷತೆಯೇ ಆದ್ಯತೆ ಎಂಬ ಧ್ಯೇಯದೊಂದಿಗೆ ರಾಜ್ಯಾದ್ಯಂತ ‘ಅಕ್ಕ ಪಡೆ’ಗೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಸಿರು ನಿಶಾನೆ ತೋರಿಸುವ ಮೂಲಕ ಈ ವಿನೂತನ ಯೋಜನೆಗೆ ಚಾಲನೆ ನೀಡಿದರು. ಮಹಿಳೆಯರು ನಿರ್ಭಯವಾಗಿ ಸಂಚರಿಸುವ ವಾತಾವರಣ ನಿರ್ಮಿಸುವುದು ಈ ಪಡೆಯ ಪ್ರಮುಖ ಉದ್ದೇಶವಾಗಿದೆ.

ಕಿತ್ತೂರು ರಾಣಿ ಚೆನ್ನಮ್ಮನ ನಾಡಾದ ಬೆಳಗಾವಿಯಲ್ಲಿ ಇಂದು ‘ಅಕ್ಕ ಪಡೆ’ಯ ಗಸ್ತು ವಾಹನಗಳಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಕರ್ನಾಟಕದ 31 ಜಿಲ್ಲೆಗಳು ಮತ್ತು 5 ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗೃಹ ಇಲಾಖೆಯ ಸಹಯೋಗದೊಂದಿಗೆ ಈ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿದ್ದು, ಶಾಲಾ-ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಈ ಪಡೆ ನಿರಂತರ ಗಸ್ತು ನಡೆಸಲಿದೆ. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ,ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಎಸ್ಪಿ ಕೆ. ರಾಮರಾಜನ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಸೇರಿದಂತೆ ಇನ್ನುಳಿದವರು ಹಸಿರು ನಿಶಾನೆ ತೋರಿಸುವ ಮೂಲಕ ಈ ವಿನೂತನ ಯೋಜನೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, “ಮಹಿಳೆಯರು ರಾತ್ರಿ 12 ಗಂಟೆಗೂ ನಿರ್ಭಯವಾಗಿ ಓಡಾಡುವಂತಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ” ಎಂದು ಅಭಿಪ್ರಾಯಪಟ್ಟರು. ಮಹಿಳೆಯರ ಮೇಲೆ ನಡೆಯುವ ಸಾಮಾಜಿಕ ಮತ್ತು ಕೌಟುಂಬಿಕ ದೌರ್ಜನ್ಯಗಳನ್ನು ತಡೆಯಲು ಸಹಾಯವಾಣಿ ಸಂಖ್ಯೆ 181 ಮತ್ತು 1098 ಅನ್ನು ಆರಂಭಿಸಲಾಗಿದೆ. ಸಂಕಷ್ಟದಲ್ಲಿರುವ ಮಹಿಳೆಯರು ಕರೆ ಮಾಡಿದ ಕೇವಲ 2 ನಿಮಿಷದಲ್ಲಿ ಅಕ್ಕ ಪಡೆಯ ಸದಸ್ಯರು ಸ್ಥಳಕ್ಕೆ ತಲುಪಿ ನೆರವು ನೀಡಲಿದ್ದಾರೆ ಎಂದು ಸಚಿವರು ಭರವಸೆ ನೀಡಿದರು.

ಅಕ್ಕ ಪಡೆಗೆ ಈಗಾಗಲೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಕುರಿತು ಗುಪ್ತಚರ ಇಲಾಖೆಯೂ ಸರ್ಕಾರಕ್ಕೆ ಸಕಾರಾತ್ಮಕ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್‌ನಲ್ಲಿ ಅಕ್ಕ ಪಡೆಯನ್ನು ರಾಜ್ಯದ ಪ್ರತಿಯೊಂದು ಮೂಲೆಗೂ ತಲುಪಿಸುವ ನಿರೀಕ್ಷೆಯಿದೆ. ಮಹಿಳಾ ಸಬಲೀಕರಣ ಮತ್ತು ಮನೆಯ ಶಾಂತಿ ಸಮೃದ್ಧಿಗಾಗಿ ಈ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಇಲಾಖೆಯ ಸಿಬ್ಬಂದಿಗಳು ಭಾಗಿಯಾಗಿದ್ಧರು.

Tags:

error: Content is protected !!