ಬೆಳಗಾವಿಯ ಕಾಕತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳರ ಹಾವಳಿ ಮಿತಿ ಮೀರಿದೆ. ಕಳೆದ ರಾತ್ರಿ ಚಾಲಾಕಿ ಕಳ್ಳರು ಟಿಪ್ಪರ್ನೊಂದಿಗೆ ಬಂದು ಇಡೀ ಅಂಗಡಿಯನ್ನೇ ಲೂಟಿ ಮಾಡಿದ್ದು, ಸಿಸಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯಗಳು ಸೆರೆಯಾಗಿವೆ.”


ಬೆಳಗಾವಿಯ ಕಾಕತಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಇಬ್ರಾಹಿಂ ಪಟವೇಗಾರ ಅವರಿಗೆ ಸೇರಿದ ‘ಎ-1 ಟೈಯರ್ಸ್’ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಆಗಮಿಸಿದ ಖದೀಮರು, ತಮ್ಮೊಂದಿಗೆ ಟಿಪ್ಪರ್ ವಾಹನವನ್ನು ತಂದು ಸುಮಾರು 1 ಲಕ್ಷ 35 ಸಾವಿರ ರೂಪಾಯಿ ಮೌಲ್ಯದ ಟೈಯರ್ಗಳನ್ನು ಅದರಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಕಳ್ಳರು ಪ್ಲ್ಯಾನ್ ಮಾಡಿಕೊಂಡೇ ಬಂದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಸ್ಪಷ್ಟವಾಗಿದ್ದು, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ವಿಶೇಷವೆಂದರೆ, ಇಬ್ರಾಹಿಂ ಅವರ ಇದೇ ಅಂಗಡಿಯಲ್ಲಿ ಈ ಹಿಂದೆಯೂ ಕೂಡ ಕಳ್ಳತನ ನಡೆದಿತ್ತು. ಈಗ ಮತ್ತೆ ಎರಡನೇ ಬಾರಿ ಕಳ್ಳರು ಕೈಚಳಕ ತೋರಿಸಿರುವುದು ಮಾಲೀಕರಲ್ಲಿ ಆತಂಕ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಕಳ್ಳರಿಗಾಗಿ ಜಾಲ ಬೀಸಿದ್ದಾರೆ. ಹೆದ್ದಾರಿ ಪಕ್ಕದಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಕಳ್ಳತನ ನಡೆದಿರುವುದು ಸ್ಥಳೀಯ ವ್ಯಾಪಾರಿಗಳ ನಿದ್ದೆ ಗೆಡಿಸಿದೆ.
