ಬೆಳಗಾವಿಯ ಪೊಲೀಸ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಈಗ ಕಲಾ ಸಂಭ್ರಮದ ಸದ್ದು. ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ ಒಂದು ಐತಿಹಾಸಿಕ ನಾಟಕ ಪ್ರದರ್ಶನಗೊಳ್ಳಲಿದೆ. ಪೊಲೀಸ್ ಸಿಬ್ಬಂದಿಯೇ ಸೇರಿ ಕಟ್ಟಿದ ನಾಟ್ಯ ಸಂಘವು ತನ್ನ 100ನೇ ನಾಟಕವನ್ನು ವೇದಿಕೆಗೆ ತರುತ್ತಿದ್ದು, ಕಲಾಕ್ಷೇತ್ರದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಬೆಳಗಾವಿ ಜಿಲ್ಲಾ ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿಯ ವಿಶೇಷ ಆಕರ್ಷಣೆಯೆಂದರೆ ಫೆಬ್ರವರಿ 15ರ ಶಿವರಾತ್ರಿಯ ರಾತ್ರಿ 10 ಗಂಟೆಗೆ ಪ್ರದರ್ಶನಗೊಳ್ಳಲಿರುವ ‘ರೈತ ನಕ್ಕರೆ ಜಗವೆಲ್ಲಾ ಸಕ್ಕರೆ’ ಎಂಬ ಸಾಮಾಜಿಕ ನಾಟಕ. ಡಿ.ಆರ್. ಪೂಜಾರಿ ಅವರ ರಚನೆಯ ಈ ನಾಟಕವು ಶ್ರೀ ವೀರಭದ್ರೇಶ್ವರ ನಾಟ್ಯ ಸಂಘದ ಮೂಲಕ 100ನೇ ನಾಟಕ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಪೊಲೀಸ್ ಹೆಡ್ ಕ್ವಾರ್ಟರ್ಸ್‌ನ ಸಿಬ್ಬಂದಿಗಳೇ ಈ ನಾಟಕದಲ್ಲಿ ಬಣ್ಣ ಹಚ್ಚುತ್ತಿರುವುದು ವಿಶೇಷ. ಈ ಕುರಿತು ಮಾಹಿತಿ ನೀಡಿರುವ ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಬಿ. ನರಗುಂದ ಅವರು, ಬೆಳಗಾವಿಯ ಕಲಾಕ್ಷೇತ್ರದಲ್ಲಿ ಪೊಲೀಸ್ ನಾಟ್ಯ ಸಂಘವು ಅಭೂತಪೂರ್ವ ಸಾಧನೆ ಮಾಡಿದೆ. ನೂರನೇ ನಾಟಕದ ಈ ಮೈಲಿಗಲ್ಲನ್ನು ಎಲ್ಲರೂ ಪ್ರೋತ್ಸಾಹಿಸಿ, ಕಲಾವಿದರನ್ನು ಹರಸಬೇಕು ಎಂದು ಮನವಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ದೇವಸ್ಥಾನದ ಆಡಳಿತಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಲಾ ವೈಭವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಫೆಬ್ರವರಿ 16ರಂದು ಪೊಲೀಸ್ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಮಕ್ಕಳಿಗೂ ತಮ್ಮ ಪ್ರತಿಭೆ ಪ್ರದರ್ಶಿಸಲು ಈ ಬಾರಿ ವೇದಿಕೆ ಕಲ್ಪಿಸಲಾಗಿದೆ.

