BELAGAVI

ಕುಂದಾನಗರಿ ಬೆಳಗಾವಿಯಲ್ಲಿ ಕೇಸರಿಮಯವಾದ ಭವ್ಯ ಸಾಂಸ್ಕೃತಿಕ ಮೆರವಣಿಗೆ

Share

ಬೆಳಗಾವಿಯ ಬೀದಿಗಳಲ್ಲಿ ಇಂದು ಸಾಂಸ್ಕೃತಿಕ ಕಹಳೆ ಮೊಳಗಿದೆ! ಹಿಂದೂ ಸಮ್ಮೇಳನದ ಹಿನ್ನೆಲೆ ಅರಂಭವಾದ ಭವ್ಯ ಸಾಂಸ್ಕೃತಿಕ ಮೆರವಣಿಗೆ, ನಗರದ ಜನರಲ್ಲಿ ಭಕ್ತಿ ಮತ್ತು ಧರ್ಮ ಜಾಗೃತಿಯ ಹೊಸ ಅಲೆ ಎಬ್ಬಿಸಿತು.ಕೇಸರಿ ಪೇಟ, ಸಾಂಪ್ರದಾಯಿಕ ಉಡುಪು ಧರಿಸಿದ ನೂರಾರು ಯುವಕ-ಯುವತಿಯರು, ಹಿರಿಯರು ಮತ್ತು ಮಕ್ಕಳು ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ್ತಾ ನಾಡಿನ ಸಂಪ್ರದಾಯವನ್ನು ಪಸರಿಸಿದರು.

ಬೆಳಗಾವಿಯ ಬಡೇಬಜಾರ್‌ನ ಸಂಯುಕ್ತ ಮಹಾರಾಷ್ಟ್ರ ಚೌಕ್‌ನಲ್ಲಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಹಿಂದೂ ಸಮ್ಮೇಳನ’ವು ವೈಭವೋಪೇತವಾಗಿ ಜರುಗಿತು. ‘ಧರ್ಮೊ ರಕ್ಷತಿ ರಕ್ಷಿತಃ’ ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮವು ಫೆಬ್ರುವರಿ 17ರ ಮಂಗಳವಾರದಂದು ಸಂಜೆ ಆರಂಭವಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಗಣೇಶ ಮಂದಿರದಿಂದ ಸಾಂಸ್ಕೃತಿಕ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಲ್ಲಿ ನೂರಾರು ಜನರು ಸಾಂಸ್ಕೃತಿಕ ಉಡುಪುಗಳನ್ನು ಧರಿಸಿ ಭಾಗವಹಿಸುವ ಮೂಲಕ ನಾಡಿನ ಸಂಪ್ರದಾಯವನ್ನು ಪಸರಿಸಿದರು. ಬೆಂಗಳೂರಿನ ಗವಿಪುರಂ ಗೋಸಾಯಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಮಂಜುನಾಥ ಭಾರತೀ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಮೆರವಣಿಗೆಯ ಆರಂಭಕ್ಕೂ ಮುನ್ನ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮನವರ ಅಶ್ವಾರೂಢ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆಯನ್ನು ನೀಡಿದರು.

ಬೆಳಗಾವಿ ಉಪನಗರದ ಮೂಲೆ ಮೂಲೆಗಳಿಂದ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಈ ಮೆರವಣಿಗೆಯೂ ಬೆಳಗಾವಿಯ ಜನರಲ್ಲಿ ಧರ್ಮ ಜಾಗೃತಿಯ ಹೊಸ ಅಲೆ ಎಬ್ಬಿಸುವಲ್ಲಿ ಯಶಸ್ವಿಯಾಯಿತು. ರಾಣಿ ಚೆನ್ನಮ್ಮ ವೃತ್ತದ ಶ್ರೀ ಗಣೇಶ್ ಮಂದಿರ, ಕಾಕತಿವೇಸ್ ರಸ್ತೆ, ಶನಿವಾರಖೂಟ್ ಮಾರ್ಗವಾಗಿ ಖಡೇಬಝಾರಕ್ಕೆ ತಲುಪಿ ಸಮ್ಮೇಳನದಲ್ಲಿ ಪರಿವರ್ತಿತಗೊಂಡಿತು. ಅಬಾಲವೃದ್ಧರು ಇದರಲ್ಲಿ ಉತ್ಸಾಹದಿಂದ ಭಾಗಿಯಾಗಿ ಹಿಂದೂ ಧರ್ಮ ಸಂಸ್ಕೃತಿಯನ್ನು ಪ್ರದರ್ಶಿಸಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶಿವಚರಿತ್ರೆಕಾರ ಡಾ. ಶಿವರತ್ನ ಶೇಟಿಯವರು ಮಾತನಾಡಿ, “ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ನಾವು ಸಂಘಟಿತರಾದಾಗ ಮಾತ್ರ ಸಮಾಜವು ಬಲಿಷ್ಠಗೊಳ್ಳಲು ಸಾಧ್ಯ” ಎಂದು ಕರೆ ನೀಡಿದರು. ಸಂಪ್ರದಾಯಗಳು ಮತ್ತು ನೀತಿಗಳನ್ನು ಉಳಿಸಿಕೊಳ್ಳಲು ಹಿಂದೂ ಸಮಾಜವು ಸದಾ ಜಾಗರೂಕರಾಗಿರಬೇಕು ಎಂಬ ಆಶಯವನ್ನು ವೇದಿಕೆಯ ಮೇಲೆ ವ್ಯಕ್ತಪಡಿಸಲಾಯಿತು.
ಸಮ್ಮೇಳನದ ಸಮಿತಿಯ ಅಧ್ಯಕ್ಷರಾದ ಶ್ರೀ ದಿಗಂಬರ ಪವಾರ್, ಕಾರ್ಯದರ್ಶಿ ಜ್ಯೋತಿಬಾ ಪಲಬ್ ಮತ್ತು ಸಮಿತಿಯ ಪದಾಧಿಕಾರಿಗಳಾದ ಗೌತಮಿ ಜಾಧವ್, ಸೀಮಾ ಅಳ್ವೆ ಸೇರಿದಂತೆ ಅನೇಕ ಗಣ್ಯರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತರಿಗಾಗಿ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

Tags:

error: Content is protected !!