ನಾಳೆ ಫೆಬ್ರುವರಿ 24 ರಂದು ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ಹಬ್ಬ ಕಾರ್ಯಕ್ರಮ ನಡೆಯಲಿದ್ದು, ನಾಳೆ ಸಂಜೆ 5 ಗಂಟೆಗೆ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ ಮತ್ತು ಅನುರಾಧಾ ಭಟ್ ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು ಹೇಳಿದರು.

ಇಂದು ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು. ಅಕ್ಟೋಬರ್ 31 ರಂದು ರಾಜ್ಯ ಸರ್ಕಾರದ ವತಿಯಿಂದ ಗಡಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರಿಂದ ಅದ್ಧೂರಿ ರಾಜ್ಯೋತ್ಸವ ಆಚರಣೆಗೆ 50 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. 3 ಲಕ್ಷ ರೂಪಾಯಿಯನ್ನು ಪ್ರದರ್ಶನಕ್ಕೆ ಮೀಸಲಿಟ್ಟು, ಉಳಿದ 47 ಲಕ್ಷ ರೂಪಾಯಿಯನ್ನು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಳಸಲಿಕೊಳ್ಳಲು ಈಗಾಗಲೇ ಕರೆದ ಕನ್ನಡಪರ ಸಂಘನಟೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಸುಮಾರು 8 ಲಕ್ಷ ರೂಪಾಯಿಯನ್ನು 5-10 ಸಾವಿರ ಜನರ ಒಂದು ವೇಳೆಯ ಭೋಜನಕ್ಕೆ ಮೀಸಲಿಡಲಾಗಿದೆ. ಇನ್ನುಳಿದ 39 ಲಕ್ಷ ರೂಪಾಯಿಯಲ್ಲಿ ಅದ್ಧೂರಿಯಾಗಿ ನಾಳೆ ಫೆಭ್ರುವರಿ 24 ರಂದು ರಾಜ್ಯೋತ್ಸವ ಆಚರಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಜವಾಬ್ದಾರಿಯನ್ನು ನೀಡಲಾಗಿದೆ.
ಇನ್ನು ಕಾರ್ಯಕ್ರಮದ ಬಗ್ಗೆ ಕನ್ನಡಪರ ಸಂಘಟನೆಗಳಿಗೆ ಮಾಹಿತಿಯಿಲ್ಲದಿದ್ದರೇ, ಮತ್ತೊಮ್ಮೆ ಸಭೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಅಂತಿಮ 10 ದಿನಗಳಲ್ಲಿ ಕೆಲ ಬದಲಾವಣೆಗಳಾಗಿವೆ. ಗೊಂದಲಗಳನ್ನು ನಿವಾರಿಸಲು ಕನ್ನಡಪರ ಸಂಘಟನೆಗಳ ಸಭೆಯನ್ನು ಕರೆದು ಒಗ್ಗಟ್ಟಾಗಿ ತಿರ್ಮಾಣವನ್ನು ಕೈಗೊಳ್ಳಲಾಗುವುದು ಎಂದರು.
ಇನ್ನು ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ. ಅವರು ಫೆಬ್ರುವರಿ 24 ರಂದು ಸಂಜೆ 5 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ ಮತ್ತು ಅನುರಾಧಾ ಭಟ್ ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಎಂ.ಕಾರ್ತಿಕ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
