ನಗರದ ಕೆರೆ ಅಭಿವೃದ್ಧಿ ಕಾಮಗಾರಿಯ ಹೆಸರಿನಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನ ಬೋರ್ಡ್ ಅನ್ನು ತೆರವುಗೊಳಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಂಚಮಸಾಲಿ ಸಮಾಜದ ಜಗದ್ಗುರು ಜಯಮೃತ್ಯುಂಜಯ ಶ್ರೀಗಳು ಅಥಣಿ ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪುರಸಭೆ ಅಧಿಕಾರಿ ಅಶೋಕ್ ಗುಡಿಮನಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಭಿವೃದ್ಧಿ ಕಾರ್ಯಗಳು ಅಗತ್ಯವೇ ಆದರೆ, ನಾಡಿನ ಹೆಮ್ಮೆಯ ಇತಿಹಾಸ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ ಎಂದು ಶ್ರೀಗಳು ಕಿಡಿಕಾರಿದರು. ಕೆರೆ ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರಿನ ಬೋರ್ಡ್ ತೆರವುಗೊಳಿಸಿರುವುದು ಅಕ್ಷಮ್ಯ ತಪ್ಪು ಎಂದು ಅವರು ಅಭಿಪ್ರಾಯಪಟ್ಟರು.
ಈ ಕುರಿತು ಪುರಸಭೆ ಅಧಿಕಾರಿ ಅಶೋಕ್ ಗುಡಿಮನಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, “ಕಿತ್ತೂರು ರಾಣಿ ಚೆನ್ನಮ್ಮ ಬೋರ್ಡ್ ಅನ್ನು 24 ಗಂಟೆಗಳೊಳಗೆ ಮರುಸ್ಥಾಪನೆ ಮಾಡಬೇಕು” ಎಂದು ಸ್ಪಷ್ಟ ಸೂಚನೆ ನೀಡಿದರು. ನಾಡಿನ ಸ್ವಾತಂತ್ರ್ಯ ಹೋರಾಟದ ಪ್ರತೀಕವಾಗಿರುವ ರಾಣಿ ಚೆನ್ನಮ್ಮ ಅವರ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಹೇಳಿದರು.
ನಿಗದಿತ ಅವಧಿಯೊಳಗೆ ಬೋರ್ಡ್ ಮರುಸ್ಥಾಪನೆ ಆಗದಿದ್ದಲ್ಲಿ, ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಜಗದ್ಗುರು ಜಯಮೃತ್ಯುಂಜಯ ಶ್ರೀಗಳು ಎಚ್ಚರಿಕೆ ನೀಡಿದರು. ಈ ವಿಚಾರದಲ್ಲಿ ಪಂಚಮಸಾಲಿ ಸಮಾಜ ಮಾತ್ರವಲ್ಲದೆ, ಸರ್ವ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದರು.
ಈ ಬೆಳವಣಿಗೆಯ ಬಳಿಕ ಅಥಣಿಯಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆ ಜೋರಾಗಿದ್ದು, ಪುರಸಭೆ ಆಡಳಿತ ಮುಂದಿನ ಕ್ರಮ ಏನು ಎನ್ನುವುದರತ್ತ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.
