ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮೈಕ್ರೋ ಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ವಿವಾಹಿತ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಗೋಡೆಯ ಮೇಲೆ ಡೆತ್ ನೋಟ್ ಬರೆದಿಟ್ಟು ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಬಹಿರಂಗಪಡಿಸಿರುವ ಘಟನೆ ಇಡೀ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಆನಿಗೋಳ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಗ್ರಾಮದ ಗೌರವ್ವ ನೀಲಪ್ಪ ಕೆಂಗಾನೂರ (36) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಜೀವನ ನಿರ್ವಹಣೆಗಾಗಿ ವಿವಿಧ ಮೈಕ್ರೋ ಫೈನಾನ್ಸ್ಗಳಲ್ಲಿ ಸುಮಾರು 7 ರಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲ ಮಾಡಿಕೊಂಡಿದ್ದ ಈಕೆಯ ಕುಟುಂಬಕ್ಕೆ, ಹಣ ಮರುಪಾವತಿಸುವಂತೆ ಫೈನಾನ್ಸ್ ಸಿಬ್ಬಂದಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಕಿರುಕುಳ ತಾಳಲಾರದೆ ಮನನೊಂದ ಗೌರವ್ವ, ಗ್ರಾಮದ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಸಾವಿಗೂ ಮುನ್ನ ಗೌರವ್ವ ಮನೆಯ ಗೋಡೆಯ ಮೇಲೆ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಸಂಘದ ಸುಮವ್ವ, ಮಂಜವ್ವ ಹಾಗೂ ಕಸ್ತೂರಿ ಎಂಬುವವರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. “ಆರೂಡ, ತಂಗಿಯನ್ನು ಚೆನ್ನಾಗಿ ನೋಡಿಕೋ.. ಸಿದ್ದಪ್ಪ ಆರೂಡನನ್ನು ಹತ್ತನೇ ತರಗತಿ ಪಾಸ್ ಮಾಡಿಸು, ಇದೇ ನನ್ನ ಕೊನೆಯ ಆಸೆ” ಎಂದು ಮಕ್ಕಳ ಭವಿಷ್ಯದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಸದ್ಯ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
