ಖಾನಾಪೂರ ತಾಲೂಕಿನ ಕಾಪೋಲಿ ಗ್ರಾಮದಲ್ಲಿ ಚಾರಿತ್ರ್ಯದ ಮೇಲೆ ಸಂಶಯ ಪಟ್ಟು ಪತಿಯೋರ್ವ ತನ್ನ ಪತ್ನಿಯನ್ನು ಅಮಾನವೀಯವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇಬ್ಬರು ಪುಟ್ಟ ಮಕ್ಕಳನ್ನು ಅನಾಥವಾಗಿಸಿದ ಈ ಪಾಪಿ ಪತಿಯ ವಿರುದ್ಧ ನಂದಗಡ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿಯ ಚಾರಿತ್ರ್ಯದ ಮೇಲೆ ಸಂಶಯ ಪಟ್ಟ ಪತಿಯೊಬ್ಬ ಆಕೆಯನ್ನು ಲಟ್ಟಣಿಗೆ ಹಾಗೂ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಕಾಪೋಲಿ ಗ್ರಾಮದಲ್ಲಿ ಜರುಗಿದೆ. ಕಿರಣ್ ಅವಿನಾಶ್ ಬಾಳೇಕುಂದ್ರಿ (30) ಕೊಲೆಯಾದ ದುರ್ದೈವಿ ಮಹಿಳೆ. ಪತಿ ಅವಿನಾಶ್ ಮಾರುತಿ ಬಾಳೇಕುಂದ್ರಿ ಈ ಅಮಾನವೀಯ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಮೃತ ಕಿರಣ್ ಅವರು ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ವ್ಯಾಪಾರದ ನಿಮಿತ್ತ ಗ್ರಾಹಕರೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದುದನ್ನು ಕಂಡ ಪತಿ ಅವಿನಾಶ್, ಆಕೆಗೆ ಅನೈತಿಕ ಸಂಬಂಧವಿದೆ ಎಂದು ಸಂಶಯ ಪಟ್ಟು ಪದೇ ಪದೇ ಜಗಳವಾಡುತ್ತಿದ್ದನು. ಇದೇ ದ್ವೇಷದಲ್ಲಿ ಜನವರಿ 20ರಂದು ಬೆಳಗಿನ ಜಾವ ಮನೆಯಲ್ಲೇ ಕಿರಣ್ ಅವರ ಮೇಲೆ ಲಟ್ಟಣಿಗೆ ಮತ್ತು ಕಟ್ಟಿಗೆಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ತಲೆ ಮತ್ತು ಮುಖಕ್ಕೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಯಿಂದಾಗಿ 10 ವರ್ಷದ ಮಗ ಹಾಗೂ 6 ವರ್ಷದ ಪುತ್ರಿ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದಾರೆ. ನಂದಗಡ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಧರ್ಮಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭಾರತೀಯ ನ್ಯಾಯ ಸಂಹಿತೆ 2023 ಕಲಂ 103(1), (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಕಾಪೋಲಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
