ಬೆಳಗಾವಿ ಜಿಲ್ಲೆಯ ನಂದಗಡ ಗ್ರಾಮದಲ್ಲಿ ಹಕ್ಕಿಪಿಕ್ಕಿ ಮತ್ತು ಕಾಟಕಾರಿ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿದ್ದ ಸುದೀರ್ಘ ಹೋರಾಟಕ್ಕೆ ಈಗ ತಾರ್ಕಿಕ ಅಂತ್ಯ ಸಿಗುವ ಲಕ್ಷಣಗಳು ಕಾಣುತ್ತಿವೆ. ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದ ಬೆನ್ನಲ್ಲೇ, ಇಂದು ಜಿಲ್ಲಾಧಿಕಾರಿಗಳು ಈ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಜನವರಿ 28ರಂದು ಖಾನಾಪುರದಲ್ಲಿ ನಡೆಯಲಿರುವ ಅಧಿಕಾರಿಗಳ ಮಹತ್ವದ ಸಭೆ ಕರೆದಿದ್ದಾರೆ.

ಕಳೆದ ಮೂರು ವರ್ಷಗಳಿಂದ ತಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿದ್ದ ಹಕ್ಕಿಪಿಕ್ಕಿ ಮತ್ತು ಕಾಟಕಾರಿ ಸಮುದಾಯದ ಬೇಡಿಕೆಗಳಿಗೆ ಕೊನೆಗೂ ಜಿಲ್ಲಾಡಳಿತದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇತ್ತೀಚೆಗೆ ನಂದಗಡ ಗ್ರಾಮದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ, ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಈ ಎರಡು ಸಮುದಾಯಗಳಿಗೆ ವಸತಿ, ಜಮೀನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜನವರಿ 28, 2026 ರಂದು ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ವಿಶೇಷ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಾಳಜಿಯನ್ನು ಶ್ಲಾಘಿಸಿ, ಬೆಳಗಾವಿ SC-ST ದೌರ್ಜನ್ಯ ತಡೆ ಸಮಿತಿ ಸದಸ್ಯ ಹಾಗೂ ಹಿರಿಯ ದಲಿತ ಮುಖಂಡ ಮಲ್ಲೇಶ್ ಚೌಗಲಾ ಮತ್ತು KRDSS ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಅವರು ಜಿಲ್ಲಾಧಿಕಾರಿಗಳನ್ನು ಸತ್ಕರಿಸಿದರು. ಜನವರಿ 28ರಂದು ಉಪವಿಭಾಗೀಯ ಅಧಿಕಾರಿಗಳು ಹಾಗೂ ತಹಶೀಲ್ದಾರರ ಸಮ್ಮುಖದಲ್ಲಿ ಸಮೀಕ್ಷೆ ಕಾರ್ಯ ಆರಂಭವಾಗಲಿದ್ದು, ದಶಕಗಳ ಕಾಲದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಂಘಟಕರು ಆಶಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ರವಿ ಮಾದರ, ರಾಘವೇಂದ್ರ ಚಲವಾದಿ, ಮಾರುತಿ ಕಾಂಬಳೆ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
