ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಮುಸುಕುದಾರಿ ಕಳ್ಳರ ಗ್ಯಾಂಗ್ ಅಬ್ಬರ ಶುರುವಾಗಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಈ ಹಿಂದೆ ‘ಚಡ್ಡಿ ಗ್ಯಾಂಗ್’ ಭೀತಿಯಲ್ಲಿದ್ದ ಜನರಿಗೆ ಈಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬರುವ ಈ ಮುಸುಕುಧಾರಿಗಳ ಗ್ಯಾಂಗ್ ಹೊಸ ತಲೆನೋವಾಗಿ ಪರಿಣಮಿಸಿದೆ.


ಕಿತ್ತೂರು ಪಟ್ಟಣದ ಕಾಲೇಜು ರಸ್ತೆಯಲ್ಲಿರುವ ಬಂಗಾರದ ಅಂಗಡಿಯೊಂದರ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸುತ್ತಿರುವ ಭಯಾನಕ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮಧ್ಯರಾತ್ರಿ ಅಖಾಡಕ್ಕಿಳಿಯುವ ಈ ಖದೀಮರು ಸಾರ್ವಜನಿಕರ ನಿದ್ದೆಗೆಡಿಸಿದ್ದಾರೆ.ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳ್ಳರ ಗ್ಯಾಂಗ್ ಸಿಸಿ ಕ್ಯಾಮೆರಾ ಕಣ್ಣಿಗೂ ಹೆದರದೆ ಹಗಲುಗಣಸಿನಂತೆ ಕಳ್ಳತನಕ್ಕೆ ಹೊಂಚು ಹಾಕುತ್ತಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಕಿತ್ತೂರಿನ ಆಯಕಟ್ಟಿನ ಪ್ರದೇಶಗಳಲ್ಲಿ ಮತ್ತು ವಾಣಿಜ್ಯ ಮಳಿಗೆಗಳ ಬಳಿ ಇಂತಹ ಕಿಡಿಗೇಡಿಗಳ ಹಾವಳಿ ಹೆಚ್ಚುತ್ತಿರುವುದರಿಂದ, ಪೊಲೀಸರು ಕೂಡಲೇ ಈ ಮುಸುಕುದಾರಿ ಗ್ಯಾಂಗ್ಗೆ ಕಡಿವಾಣ ಹಾಕಬೇಕು ಮತ್ತು ರಾತ್ರಿ ಗಸ್ತನ್ನು ಚುರುಕುಗೊಳಿಸಬೇಕೆಂದು ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಸ್ಥರು ತೀವ್ರವಾಗಿ ಒತ್ತಾಯಿಸಿದ್ದಾರೆ.

