Bailahongala

ಬೈಲಹೊಂಗಲದಲ್ಲಿ ಬೀದಿ ನಾಯಿಗಳ ಅಟ್ಟಹಾಸ: ಏಳು ಜನರಿಗೆ ಗಾಯ, ಏಳು ವರ್ಷದ ಬಾಲಕಿ ಸ್ಥಿತಿ ಗಂಭೀರ

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಒಂದೇ ದಿನ ಏಳು ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಕಿರಾಣಿ ಅಂಗಡಿಗೆ ತೆರಳುತ್ತಿದ್ದ ಏಳು ವರ್ಷದ ಬಾಲಕಿಯ ಮೇಲೆ ನಾಯಿ ಭೀಕರವಾಗಿ ದಾಳಿ ಮಾಡಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬೈಲಹೊಂಗಲ ಪಟ್ಟಣದ ಎಂ.ಜಿ. ಹೌಸಿಂಗ್ ಕಾಲೋನಿಯಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಕಾಲೋನಿಯ ನಿವಾಸಿ ಸುಪ್ರಿಯಾ ಪಾಟೀಲ್ (7) ಎಂಬ ಬಾಲಕಿ ಕಿರಾಣಿ ಅಂಗಡಿಗೆ ಹೋಗುತ್ತಿದ್ದಾಗ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ನಾಯಿಯ ಭೀಕರ ದಾಳಿಯಿಂದಾಗಿ ಬಾಲಕಿಯ ತಲೆ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಬಾಲಕಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಾಯದ ತೀವ್ರತೆ ಹೆಚ್ಚಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೇವಲ ಈ ಬಾಲಕಿ ಮಾತ್ರವಲ್ಲದೆ, ಒಂದೇ ದಿನದಲ್ಲಿ ಪಟ್ಟಣದ ವಿವಿಧೆಡೆ ಒಟ್ಟು ಏಳು ಜನರಿಗೆ ನಾಯಿ ಕಚ್ಚಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ.

ಪಟ್ಟಣದ ಕೆ.ಸಿ. ನಗರ, ಇಂದಿರಾ ನಗರ ಸೇರಿದಂತೆ ಪ್ರಮುಖ ಓಣಿಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿಮೀರಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸರಣಿ ದಾಳಿಗಳು ನಡೆಯುತ್ತಿದ್ದರೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಮುಂದುವರೆದಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಸದ್ಯ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಗಳು ವರದಿಯಾಗಿದ್ದು, ಕೂಡಲೇ ನಾಯಿಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!