Savadatti

ಸವದತ್ತಿ: ಚರಂಡಿ ಸಮಸ್ಯೆ ಪ್ರಶ್ನಿಸಿದ್ದಕ್ಕೆ ಹಲ್ಲೆ; ಗ್ರಾ.ಪಂ ಅಧ್ಯಕ್ಷನ ದರ್ಪಕ್ಕೆ ಬಡ ಕುಟುಂಬ ಕಣ್ಣೀರು!

Share

ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದ ಸಮಸ್ಯೆ ಕುರಿತು ಪ್ರಶ್ನೆ ಮಾಡಿದ ಹನುಮಂತ ಕರಿಕಟ್ಟಿ ಮೇಲೆ ಹಲ್ಲೆ ಮಾಡಿದ ಗ್ರಾಪಂ ಅಧ್ಯಕ್ಷನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶನಿವಾರ ಹನುಮಂತ ‌ಕುಟುಂಬಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಪ. ಅಧ್ಯಕ್ಷ ದುರ್ಗಪ್ಪ ಟೋಪಾಜಿ ಹಾಗೂ ಅವರ ಸಂಬಂಧಿಗಳು ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮದ ಹನುಮಂತ ಕರಿಕಟ್ಟಿ ಕುಟುಂಬಸ್ಥರು ಸುದ್ದಿಗಾರ ಮುಂದೆ ಆರೋಪಿಸಿದ್ದಾರೆ. ಶಾಲೆ ಪಕ್ಕದ ರಸ್ತೆಯಲ್ಲಿ ನಿಂತಿರುವ ಚರಂಡಿ ನೀರಿನ ಸಮಸ್ಯೆಯನ್ನು ಪಿಡಿಓ ಗಮನಕ್ಕೆ ತಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ‌. ರಸ್ತೆ ಮೇಲೆ ನಿಂತ ಚರಂಡಿ ನೀರಿನಲ್ಲೇ ಶಾಲೆ, ಅಂಗನವಾಡಿ ಮಕ್ಕಳು ಹಾಗೂ ಸಾರ್ವಜನಿಕರು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ದುರಸ್ತಿ ಮಾಡುವಂತೆ ಹನುಮಂತ ಮನವಿ ಮಾಡಿದ್ದರು. ಈ ಸಂದರ್ಭ ಏಕಾಏಕಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಪ್ಪಲಿಯಿಂದ ಹಲ್ಲೆ ನಡೆಸಿ, ಬೆನ್ನು ಕಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.

ದುರ್ಗಪ್ಪ, ಡಿ.ಡಿ. ಟೋಪಾಜಿ ಎನ್ನುವವರು ಹೊಲಕ್ಕೆ ಬಂದು ಮನೆ ಮಂದಿಯೆಲ್ಲ ಕೂಡಿ ಹೊಡೆದಿದ್ದಾರೆ. ಕೊರಳಲ್ಲಿದ್ದ 2 ತೊಲೆ ಚಿನ್ನದ ಸರವನ್ನು ಕೂಡ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ಕೂಡ ಯಾವುದೇ ಸ್ಪಂದನೆ ದೊರೆತಿಲ್ಲ. ಕಬ್ಬಿನ ಹೊಲಕ್ಕೂ ನುಗ್ಗಿ ಹಲ್ಲೆ ನಡೆಸಿದ್ದಾರೆ. ದುರ್ಗಪ್ಪ ಎನ್ನುವವರು ಬೆದರಿಕೆ ಹಾಕುತ್ತಿದ್ದು, ನಮಗೆ ನ್ಯಾಯ ಬೇಕು ಎಂದು ಹೂವಕ್ಕ ಹೇಳಿದರು.

ನಮಗೂ ಅವರಿಗೂ ಯಾವುದೇ ಸಂಬಂಧವೇ ಇಲ್ಲ. ವಿನಾಃಕಾರಣ ಹೊಲಕ್ಕೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಗಾಯಗೊಂಡು ಆಸ್ಪತ್ರೆಗೆ ಹೋದರೂ ಅಲ್ಲಿಂದ ಪೊಲೀಸರು ಊರಿಗೆ ತೆರಳುವಂತೆ ಹೇಳಿದ್ದಾರೆಂದು ಮಲ್ಲಪ್ಪ ಹೇಳಿದರು.

ಡಿ.ಡಿ. ಟೋಪಾಜಿ, ಕೃಷ್ಣಾ ಲೋಟೆ, ಬಾಬು ಲೋಟೆ, ಸಿದ್ಧು ಲೋಟೆ ಎನ್ನುವವರು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ನಾವು ಭೂಮಿಯ ಕೆಲಸ ಮಾಡುವವರು ನಮಗೆ ರಕ್ಷಣೆ ಬೇಕು. ನೀವು ಇಲ್ಲಿ ಇದ್ದು ತೋರಿಸಿ ಎಂದು ಅವರು ಸವಾಲು ಹಾಕುತ್ತಿದ್ದಾರೆ. ರಾಜಕೀಯವಾಗಿರುವವರಿಗೆ ರಕ್ಷಣೆ ಇದೆ. ಬಡವರಿಗೆ ಯಾಕಿಲ್ಲ. ಮೂರು ದಿನ ಠಾಣೆಯಲ್ಲಿದ್ದರೂ ನ್ಯಾಯ ದೊರೆತಿಲ್ಲವೆಂದು ಅಂಬಿಕಾ ಆರೋಪಿಸಿದ್ದಾರೆ.

Tags:

error: Content is protected !!