Nandagad

ಉದ್ಘಾಟನೆಗೂ ಮುನ್ನವೇ ರಾಯಣ್ಣ ಮ್ಯೂಸಿಯಂನಲ್ಲಿ ಸಂಕ್ರಾಂತಿ ಸಂಭ್ರಮ: ಸರ್ಕಾರಿ ವಾಹನ ದುರುಪಯೋಗಪಡಿಸಿಕೊಂಡ ಅಧಿಕಾರಿ!

Share

ಇನ್ನು ಉದ್ಘಾಟನೆಯೇ ಕಾಣದ, ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಯಾಗಬೇಕಿರುವ ಐತಿಹಾಸಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಆವರಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ನಿಯಮ ಮೀರಿ ಸಂಕ್ರಾಂತಿ ಆಚರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಖಾನಾಪೂರ ತಾಲೂಕಿನ ಕಸಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಯಣ್ಣ ಮ್ಯೂಸಿಯಂ ಜನವರಿ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಳ್ಳಲಿದೆ. ಭದ್ರತೆಯ ದೃಷ್ಟಿಯಿಂದ ಸದ್ಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೆ, ಖಾನಾಪೂರ ತಾಲೂಕು ಪಂಚಾಯತ್‌ನ MGNREGA ಯೋಜನೆಯ ಸಹಾಯಕ ನಿರ್ದೇಶಕಿ ರೂಪಾ ಬಡಕುಂದ್ರಿ ಅವರು ಸಂಕ್ರಾಂತಿ ಹಬ್ಬದ ರಜೆಯ ದಿನದಂದು ಸರ್ಕಾರಿ ವಾಹನದಲ್ಲಿ ಕುಟುಂಬ ಸಮೇತ ಇಲ್ಲಿಗೆ ಆಗಮಿಸಿ ಭೋಜನ ಸವಿದಿದ್ದಾರೆ. ಸರ್ಕಾರಿ ರಜೆಯ ದಿನದಂದು ನಿಯಮ ಬಾಹಿರವಾಗಿ ಕುಟುಂಬ ಸಮೇತ ಸರ್ಕಾರಿ ವಾಹನವನ್ನು ಬಳಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಿಎಂ ಉದ್ಘಾಟನೆ ಮಾಡುವ ಮೊದಲೇ, ಸಾರ್ವಜನಿಕರಿಗೆ ನಿರ್ಬಂಧವಿರುವ ಸ್ಥಳಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರವೇಶ ಪಡೆದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ವಾಹನ ಚಾಲಕನನ್ನು ಪ್ರಶ್ನಿಸಿದಾಗ, “ಅಧಿಕಾರಿಗಳು ಬಂದಿದ್ದಾರೆ, ಅವರ ಫ್ಯಾಮಿಲಿ ಬಂದಿದೆ” ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳಲು ಯತ್ನಿಸಿದ್ದಾರೆ.”ಮುಖ್ಯಮಂತ್ರಿಗಳು ಉದ್ಘಾಟಿಸುವ ಮೊದಲೇ ಸರ್ಕಾರಿ ಅಧಿಕಾರಿಗಳು ನಿಯಮ ಗಾಳಿಗೆ ತೂರಿ ರಜೆಯ ದಿನ ಮೋಜು-ಮಸ್ತಿ ಮಾಡಿರುವುದು ಖಂಡನೀಯ. ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.” ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ಮೇತ್ರಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಶನ್ ಅವರು ಈ ಗಂಭೀರ ಲೋಪದ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Tags:

error: Content is protected !!