Nandagad

ನಂದಗಡದಲ್ಲಿ ರಾಯಣ್ಣನ ‘ವೀರಭೂಮಿ’ ಲೋಕಾರ್ಪಣೆ: ಪೂರ್ವಸಿದ್ಧತೆ ವೀಕ್ಷಿಸಿದ ಡಾ. ಅಂಜಲಿ ನಿಂಬಾಳ್ಕರ್

Share

ನಂದಗಡ: ಖಾನಾಪುರ ತಾಲೂಕಿನ ಐತಿಹಾಸಿಕ ಪುಣ್ಯಭೂಮಿ ನಂದಗಡದಲ್ಲಿ ನಿರ್ಮಾಣಗೊಂಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬೃಹತ್ ‘ವೀರಭೂಮಿ’ ಮ್ಯೂಸಿಯಂ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.

ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ರಾಯಣ್ಣನನ್ನು ಗಲ್ಲಿಗೇರಿಸಿದ ಈ ವೀರಭೂಮಿಯಲ್ಲಿ ಅಂದಾಜು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಂದಗಡದ ಕೆರೆಯ ಮಧ್ಯದಲ್ಲಿ ಸ್ಥಾಪಿಸಲಾದ ರಾಯಣ್ಣನ ಭವ್ಯ ಪ್ರತಿಮೆ ಹಾಗೂ ಸುಸಜ್ಜಿತ ಮ್ಯೂಸಿಯಂ ನಾಳೆ (ಜನವರಿ 19) ಲೋಕಾರ್ಪಣೆಗೊಳ್ಳಲಿದೆ.

ಸಿದ್ಧತೆಗಳನ್ನು ವೀಕ್ಷಿಸಿದ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀಮತಿ ಆರ್. ರಂಜನೀಶ್ ಅವರು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.ಮ್ಯೂಸಿಯಂ ಉದ್ಘಾಟನೆ ಮತ್ತು ಪ್ರತಿಮೆ ಲೋಕಾರ್ಪಣೆ.ವಿವಿಧ ಹೊಸ ಕಾಮಗಾರಿಗಳಿಗೆ ಭೂಮಿ ಪೂಜೆ.ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ವ್ಯವಸ್ಥೆ.
ಈ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ರಾಜ್ಯ ಸರ್ಕಾರದ ವಿವಿಧ ಸಚಿವರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಈ ಭಾಗದ ಜನರ ಬಹುದಿನಗಳ ಕನಸಾಗಿದ್ದ ಈ ಮ್ಯೂಸಿಯಂ ರಾಯಣ್ಣನ ಶೌರ್ಯದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಾರಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

“ನಾಡಿನ ಹೆಮ್ಮೆಯ ಕ್ರಾಂತಿವೀರನ ಸ್ಮರಣಾರ್ಥ ನಡೆಯುತ್ತಿರುವ ಈ ಮಹೋತ್ಸವಕ್ಕೆ ಖಾನಾಪುರ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಡಾ. ಅಂಜಲಿ ನಿಂಬಾಳ್ಕರ್ ಅವರು ಮನವಿ ಮಾಡಿದ್ದಾರೆ.

Tags:

error: Content is protected !!