ರಾಜ್ಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಓದು ದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸಂಪುಟ ಅನುಮೋದಿಸಿದ ಭಾಷಣವನ್ನು ಓದದೆ ಸಂವಿಧಾನದ ವಿಧಿ 176ನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ನೇರ ವಾಗ್ದಾಳಿ ನಡೆಸಿದ್ದಾರೆ. ನರೇಗಾ ಬದಲಿಗೆ ತಂದಿರುವ ಹೊಸ ಕಾಯ್ದೆಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೆ, ಸ್ವತಃ ಸಿದ್ಧಪಡಿಸಿದ ಭಾಷಣದ ಭಾಗವನ್ನು ಓದಿರುವುದು ಸಂವಿಧಾನ ಬಾಹಿರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಹಳೆಯ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ನಡೆಯ ವಿರುದ್ಧ ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿದ ಅವರು, ರಾಜ್ಯಪಾಲರ ಕ್ರಮವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದೆಡೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ರದ್ದುಗೊಳಿಸಿ ‘ಜಿ ರಾಮ್ ಜಿ’ ಕಾಯ್ದೆಯನ್ನು ಜಾರಿಗೆ ತಂದಿರುವುದಕ್ಕೆ ಸಿಎಂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ 28 ಲಕ್ಷ ದಲಿತ ಕಾರ್ಮಿಕರು ಸೇರಿದಂತೆ ಬಡವರ ಉದ್ಯೋಗದ ಹಕ್ಕಿಗೆ ಸಂಚಕಾರ ಬಂದಿದೆ. ಗ್ರಾಮ ಪಂಚಾಯತ್ಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದ್ದು, ಬಡ ಕಾರ್ಮಿಕರಿಗೆ ಕೆಲಸದ ಭರವಸೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರದ ಈ ಜನವಿರೋಧಿ ಧೋರಣೆಯ ವಿರುದ್ಧ ಹಾಗೂ ಮನರೇಗಾ ಮರುಸ್ಥಾಪನೆಗಾಗಿ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
