ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಉಗಾರದ ಶ್ರೀ ಪದ್ಮಾವತಿ ಮಂದಿರದ ಸಮುದಾಯ ಭವನ ನಿರ್ಮಾಣ ಹಾಗೂ ಮಂದಿರದ ಮುಂಭಾಗದ ಆರ್ಸಿಸಿ ರಸ್ತೆ ಕಾಮಗಾರಿಗೆ ಶಾಸಕ ರಾಜು ಕಾಗೆ ಅವರು ಮಂಗಳವಾರ ಬೆಳಿಗ್ಗೆ ಭೂಮಿಪೂಜೆ ನೆರವೇರಿಸಿದರು.

ಅಲ್ಪಸಂಖ್ಯಾತ ಇಲಾಖೆಯ 50 ಲಕ್ಷ ರೂಪಾಯಿ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ 15 ಲಕ್ಷ ರೂಪಾಯಿ ಸೇರಿದಂತೆ ಒಟ್ಟು *65 ಲಕ್ಷ ರೂಪಾಯಿ* ವೆಚ್ಚದಲ್ಲಿ ಈ ಕಾಮಗಾರಿಗಳು ನಡೆಯಲಿವೆ. ಮಂದಿರದ ಅಂಗಳದಲ್ಲಿ ಆರ್ಸಿಸಿ ಕಾಂಕ್ರೀಟ್ ಹಾಕುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ರಾಜು ಕಾಗೆ, “ಶ್ರೀ ಪದ್ಮಾವತಿ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮಂದಿರದ ಮುಖ್ಯಸ್ಥರಾದ ಶೀತಲ್ ಪಾಟೀಲ್ ಅವರು ನಿರಂತರ ಶ್ರಮಿಸುತ್ತಿದ್ದಾರೆ. ಅವರ ಈ ಸೇವಾ ಕಾರ್ಯಕ್ಕೆ ಸಹಕರಿಸುವುದು ಹಾಗೂ ದೇವಿಯ ಆಶೀರ್ವಾದ ಪಡೆಯುವ ಉದ್ದೇಶದಿಂದ ಈ ಅನುದಾನ ನೀಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಪಕ್ಷ ಅಥವಾ ಜಾತಿ ಭೇದ ಮಾಡದೆ, ಸಮಸ್ಯೆ ಹೊತ್ತು ಬಂದ ಎಲ್ಲರಿಗೂ ಸ್ಪಂದಿಸಿದ್ದೇನೆ,” ಎಂದು ಹೇಳಿದರು.
ಕರ್ನಾಟಕ ರಾಜ್ಯ ಜೈನ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ಮಂದಿರದ ಮುಖ್ಯಸ್ಥರಾದ *ಶೀತಲಗೌಡ ಪಾಟೀಲ* ಮಾತನಾಡಿ, “ಮಂದಿರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ರಾಜು ಕಾಗೆ ಅವರ ಮುಂದೆ ಎರಡು ಬೇಡಿಕೆಗಳನ್ನು ಇಟ್ಟಿದ್ದೆವು. ಅವರು ತಕ್ಷಣವೇ ಸ್ಪಂದಿಸಿ ಅನುದಾನ ಮಂಜೂರು ಮಾಡಿದ್ದಾರೆ. ಅವರಿಗೆ ಗ್ರಾಮಸ್ಥರ ಹಾಗೂ ಭಕ್ತಾದಿಗಳ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ,” ಎಂದರು.
ಕಾರ್ಯಕ್ರಮದಲ್ಲಿ ಅರ್ಚಕರಾದ ಅಶೋಕ್ ಉಪಾಧ್ಯೆ ಮತ್ತು ಭರತ್ ಉಪಾಧ್ಯೆ ಅವರು ಮಂತ್ರೋಪಚಾರದ ಮೂಲಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಪ್ರಮುಖರಾದ ಪಾಸಗೌಡ ಪಾಟೀಲ, ಅಣ್ಣಾಗೌಡ ಪಾಟೀಲ, ದೀಪಕ್ ಪಾಟೀಲ, ಎಂಜಿನಿಯರ್ ಆದೇಶ ಹೊಸವಾಡೆ, ಭರತೇಶ್ ಖಂಡಿರಾಜುರಿ, ದಾದಾ ಅಳಪ್ಪನವರ, ಸುರೇಶ್ ವಸವಾಡೆ, ಅಣ್ಣಾಸಾಹೇಬ ಪಾಂಗರೆ, ಸುಭಾಷ ಖಂಡೇರಜೂರಿ, ಅನಿಲ್ ಸದಲಗೆ ಹಾಗೂ ಗುತ್ತಿಗೆದಾರ ಸಂದೀಪ್ ಖರಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
