ಬೆಳಗಾವಿಯ ಸದಾಶಿವ ನಗರದಲ್ಲಿ ಫೆಬ್ರವರಿ 1ರ ಭಾನುವಾರ ಸಂಜೆ ಬೃಹತ್ ಹಿಂದೂ ಸಮಾವೇಶ ಆಯೋಜನೆಯಾಗಿದೆ. ಸಮಾವೇಶದ ಪೂರ್ವಭಾವಿಯಾಗಿ ನೆಹರು ನಗರದಿಂದ ಹನುಮಾನ್ ನಗರದವರೆಗೆ ನಡೆದ ಬೈಕ್ ರ್ಯಾಲಿಯು ನಗರದಾದ್ಯಂತ ಭವ್ಯ ಕೇಸರಿ ಅಲೆಯನ್ನು ಮೂಡಿಸಿದ್ದು, ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಬೆಳಗಾವಿ: ಸದಾಶಿವ ನಗರದ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ “ಹಿಂದವ: ಸೋದರಾ ಸರ್ವೇ” ಎಂಬ ಘೋಷವಾಕ್ಯದೊಂದಿಗೆ ಫೆಬ್ರವರಿ 1ರಂದು ಸಂಜೆ ಸದಾಶಿವ ನಗರದ ಗಾಣಿಗ ಸಮಾಜದ ಅಭಿವೃದ್ಧಿ ಸಂಘದ ಮೈದಾನದಲ್ಲಿ ಬೃಹತ್ ಹಿಂದೂ ಸಮಾವೇಶವನ್ನು ಆಯೋಜಿಸಲಾಗಿದೆ.ಈ ಸಮಾವೇಶದ ಹಿನ್ನೆಲೆಯಲ್ಲಿ ಇಂದು ನೆಹರು ನಗರದ ಶ್ರೀ ಬಸವಣ್ಣ ಮಂದಿರದಿಂದ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಭಗವಾ ಚೌಕ್, ಸದಾಶಿವ ನಗರ, ಬೆಲದಾರ್ ಛಾವಣಿ, ಹರಿದ್ರಾ ಗಣೇಶ್ ಮಂದಿರ, ಅಂಬೇಡ್ಕರ್ ನಗರ ಮುಖ್ಯ ರಸ್ತೆ, ಶಿವಾಲಯ ರಸ್ತೆ, ರೈಲ್ ನಗರ ಹಾಗೂ ಜಾಧವ್ ನಗರ ಸೇರಿದಂತೆ ವಿವಿಧ ಪ್ರಮುಖ ವೀದಿಗಳಲ್ಲಿ ಸಂಚರಿಸಿದ ರ್ಯಾಲಿಯು ಹನುಮಾನ್ ನಗರ ವೃತ್ತದಲ್ಲಿ ಮುಕ್ತಾಯಗೊಂಡಿತು. ರ್ಯಾಲಿಯುದ್ದಕ್ಕೂ ಹಿಂದೂ ಸಂಘಟನೆಯ ಕಾರ್ಯಕರ್ತರ ಜಯಘೋಷಗಳು ಮೊಳಗಿದವು.
ನಂತರ ಮಾಧ್ಯಮಗೋಷ್ಟಿ ನಡೆಸಿ ಸಮಿತಿಯ ಗೌರವ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಅಧ್ಯಕ್ಷ ಮಾರುತಿ ಮಾಸೇಕರ ಅವರು ಹೆಚ್ಚಿನ ಮಾಹಿತಿಯನ್ನು ನೀಡಿದರು. ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ವಕೀಲ ಲಕ್ಷ್ಮಣ ನಾಯಕ, ಸಂಸ್ಕೃತ ಭಾರತಿಯ ಪ್ರಾಂತ ಮಂತ್ರಿ ಶ್ರೀಕಾಂತ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯ ಚಿಕ್ಕೋಡಿ ಜಿಲ್ಲಾ ಕಾರ್ಯವಾಹ ಅನುಷಾ ಕೌಶಿಕ ಅವರು ಮುಖ್ಯ ವಕ್ತಾರರಾಗಿ ಆಗಮಿಸಲಿದ್ದಾರೆ. ಸಮಸ್ತ ಹಿಂದೂ ಬಾಂಧವರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಅಂಕಲಗಿ-ಕುಂದರಗಿಯ ಶ್ರೀ ಅಡವಿ ಸಿದ್ದೇಶ್ವರ ಮಠದ ಪರಮಪೂಜ್ಯ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ಸಮಾವೇಶದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷ ಮಾರುತಿ ಮಾಸೇಕರ ಸೇರಿದಂತೆ ಪದಾಧಿಕಾರಿಗಳು ಮಾಹಿತಿ ನೀಡಿದರು.
