ನಿಪ್ಪಾಣಿ ಹೊರವಲಯದ ಆಂದೋಲನ ನಗರದಲ್ಲಿರುವ ಪ್ರಸಿದ್ಧ ಶ್ರೀ ಸ್ವಾಮಿ ಸಮರ್ಥ ದೇವಸ್ಥಾನದಲ್ಲಿ ತಡರಾತ್ರಿ ಕಳ್ಳತನ ನಡೆದಿದ್ದು, ಸೋಮವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ನಾಲ್ವರು ಮುಖವಾಡಧಾರಿ ಕಳ್ಳರು ದೇವಸ್ಥಾನದ ಹುಂಡಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ದೇವಸ್ಥಾನದಲ್ಲಿ ನಡೆಯುತ್ತಿರುವ ಎರಡನೇ ಕಳ್ಳತನ ಇದಾಗಿದ್ದು, ಸ್ಥಳೀಯ ಭಕ್ತರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ. ಕಳ್ಳರು ವ್ಯವಸ್ಥಿತವಾಗಿ ಯೋಜನೆ ರೂಪಿಸಿ, ತಮ್ಮ ಗುರುತು ಪತ್ತೆಯಾಗದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೃತ್ಯ ಎಸಗಿದ್ದಾರೆ.ಘಟನಾ ಸ್ಥಳಕ್ಕೆ ನಿಪ್ಪಾಣಿ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

