ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ ಜಾಲಕ್ಕೆ ಬೀಳಿಸಿ, ಧರ್ಮ ಬದಲಿಸುವಂತೆ ಮೈಂಡ್‌ವಾಶ್ ಮಾಡಿ ಬೆಂಗಳೂರಿಗೆ ಅಪಹರಿಸಿಕೊಂಡು ಹೋಗಿದ್ದ ಆರೋಪಿಯನ್ನು ಅಥಣಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅಥಣಿಯ ಪಿಯುಸಿ ವಿದ್ಯಾರ್ಥಿನಿಯನ್ನು ಆರೋಪಿ ಶಾಹಿಲ್ ಎಂಬಾತ ಸಂಬಂಧಿಕ ಯುವತಿಯ ಮೂಲಕ ಪರಿಚಯ ಮಾಡಿಕೊಂಡಿದ್ದ. ಆರಂಭದಲ್ಲಿ ಸ್ನೇಹ ಬೆಳೆಸಿದ ಈತ, ನಂತರ ಬಾಲಕಿಯ ನಂಬಿಕೆ ಗಿಟ್ಟಿಸಿಕೊಂಡು ಎರಡು-ಮೂರು ಬಾರಿ ಹೋಟೆಲ್‌ಗಳಿಗೆ ಕರೆದೊಯ್ದಿದ್ದ. ಇದೇ ಸ್ನೇಹವನ್ನು ಬಳಸಿಕೊಂಡು ಬಾಲಕಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಪ್ರೇರೇಪಿಸಿದ್ದ ಎನ್ನಲಾಗಿದೆ.”ಮುಂದೊಂದು ದಿನ ಇಡೀ ದೇಶವೇ ಮುಸ್ಲಿಂ ರಾಷ್ಟ್ರವಾಗಲಿದೆ, ನೀನು ಹಿಂದೂ ಧರ್ಮ ಬಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ನನ್ನನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಶಾಹಿಲ್ ಬಾಲಕಿಯ ಮೊಬೈಲ್‌ಗೆ ವಾಟ್ಸಪ್ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಇದೇ ಜನವರಿ 28ಕ್ಕೆ ಬಾಲಕಿಗೆ 18 ವರ್ಷ ತುಂಬಲಿದ್ದು, ಅದಾದ ಬಳಿಕ ಮದುವೆಯಾಗುವ ಸಂಚು ರೂಪಿಸಿದ್ದ ಶಾಹಿಲ್, ಕಳೆದ ವಾರ ಬಾಲಕಿಯನ್ನು ಬೆಂಗಳೂರಿಗೆ ಅಪಹರಿಸಿದ್ದ. ಮಗಳು ನಾಪತ್ತೆಯಾದ ಬಗ್ಗೆ ಬಾಲಕಿಯ ತಾಯಿ ಅಥಣಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಅಥಣಿ ಸಿಪಿಐ ಸಂತೋಷ್ ಹಲ್ಲೂರ ಅವರು ಕೂಡಲೇ ಎರಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದರು. ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಬೆಂಗಳೂರಿನಲ್ಲಿದ್ದ ಆರೋಪಿ ಮತ್ತು ಬಾಲಕಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
