ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದಲ್ಲಿ ವಿಚಿತ್ರ ಕಳ್ಳತನವೊಂದು ನಡೆದಿದೆ. ಮನೆ, ದೇವಸ್ಥಾನ ಹಾಗೂ ಬೈಕ್ ಕಳ್ಳತನಗಳ ಬೆನ್ನಲ್ಲೇ ಈಗ ಕಳ್ಳರು ರೈತರ ಜಮೀನಿನಲ್ಲಿದ್ದ ಮರಗಳನ್ನು ಕಳ್ಳತನ ಮಾಡುವ ಮೂಲಕ ಪೊಲೀಸರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕಳ್ಳರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಗಸಗಾ ಗ್ರಾಮದ ಹೊರವಲಯದಲ್ಲಿರುವ ಬುದಾಜೀ ಮೆಣಸೆ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಬೆಳೆಸಲಾಗಿದ್ದ ಸುಮಾರು 25 ನೀಲಗಿರಿ ಮರಗಳನ್ನು ಕಳ್ಳರು ರಾತ್ರೋರಾತ್ರಿ ಕತ್ತರಿಸಿಕೊಂಡು ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಮನೆಗಳ್ಳತನ, ಮಂದಿರಗಳ ಹುಂಡಿ ಹಾಗೂ ರಸ್ತೆಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಸರಣಿಯಾಗಿ ನಡೆಯುತ್ತಿವೆ. ಆದರೆ ಈಗ ಮರಗಳನ್ನು ಬಿಡದ ಕಳ್ಳರ ಈ ಹೊಸ ಅವತಾರ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.
ಪೊಲೀಸರ ಬೀಟ್ ಸಮಯವನ್ನೇ ಗಮನಿಸಿ, ಅವರು ಇಲ್ಲದ ಸಮಯದಲ್ಲಿ ಸಂಚು ರೂಪಿಸಿ ಈ ಕೃತ್ಯ ಎಸಗಲಾಗುತ್ತಿದೆ. ಮರಗಳ್ಳತನದಿಂದಾಗಿ ಬಡ ರೈತರಿಗೆ ಭಾರಿ ಆರ್ಥಿಕ ನಷ್ಟವುಂಟಾಗಿದ್ದು, ಪೊಲೀಸರ ಜಾಗೃತಿ ಕ್ರಮಗಳು ಕೇವಲ ಹೆಸರಿಗಷ್ಟೇ ಸೀಮಿತವಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. “ಪೊಲೀಸರು ಎಷ್ಟು ಜಾಗೃತಿ ಮೂಡಿಸಿದರೂ ಕಳ್ಳತನಗಳು ನಿಲ್ಲುತ್ತಿಲ್ಲ, ಕೂಡಲೇ ಇದಕ್ಕೆ ಪರ್ಯಾಯ ಭದ್ರತಾ ವ್ಯವಸ್ಥೆ ಮಾಡಬೇಕು” ಎಂದು ಅಗಸಗಾ ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.

