ರಾಜ್ಯ ರಾಜಧಾನಿಯಲ್ಲಿ ಲೋಕಾಯುಕ್ತ ಪೊಲೀಸರ ಭ್ರಷ್ಟ ಬೇಟೆ ಮುಂದುವರಿದಿದೆ. ಚೀಟಿ ವ್ಯವಹಾರದ ಪ್ರಕರಣವೊಂದನ್ನು ಇತ್ಯರ್ಥಪಡಿಸಲು 4 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಅವರು ಇಂದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚೀಟಿ ವ್ಯವಹಾರದ ವಿವಾದವೊಂದನ್ನು ಬಗೆಹರಿಸಲು ಇನ್ಸ್ಪೆಕ್ಟರ್ ಗೋವಿಂದರಾಜು ದೂರುದಾರರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕರಣದಲ್ಲಿ ಆರೋಪಿ ಪಟ್ಟಿಯಿಂದ ಹೆಸರು ಕೈಬಿಡಲು ಅಥವಾ ಅನುಕೂಲ ಮಾಡಿಕೊಡಲು ಬರೋಬ್ಬರಿ 4 ಲಕ್ಷ ರೂಪಾಯಿ ಲಂಚ ಕೇಳಿದ್ದರು ಎನ್ನಲಾಗಿದೆ. ಲಂಚ ನೀಡಲು ಇಚ್ಛಿಸದ ದೂರುದಾರರು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ನೇತೃತ್ವದ ತಂಡ ಸಿರಸಿ ಸರ್ಕಲ್ ಬಳಿಯ ಸಿಎಆರ್ ಮೈದಾನದ ಹತ್ತಿರ ಹೊಂಚು ಹಾಕಿತ್ತು. ನಿಗದಿಪಡಿಸಿದಂತೆ ಇನ್ಸ್ಪೆಕ್ಟರ್ ಗೋವಿಂದರಾಜು ಹಣ ಸ್ವೀಕರಿಸುತ್ತಿದ್ದಂತೆಯೇ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
