ಸಾರ್ವಜನಿಕರ ಆಸ್ತಿಯಾಗಿರುವ ಸರ್ಕಾರಿ ವಾಹನಗಳು ಜನಸೇವೆಯ ಬದಲು ಅಧಿಕಾರಿಗಳ ವೈಯಕ್ತಿಕ ಮೋಜು-ಮಸ್ತಿಗೆ ಬಳಕೆಯಾಗುತ್ತಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಥಣಿ ಪಟ್ಟಣದ ಹೊರವಲಯದ ಗೋಕಾಕ್ ರಸ್ತೆಯಲ್ಲಿರುವ ಶ್ರೀನಿಧಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಅಧಿಕಾರಿಯೊಬ್ಬರು ಸರ್ಕಾರಿ ವಾಹನದಲ್ಲಿ ಆಗಮಿಸಿ ಕಂಠಪೂರ್ತಿ ಕುಡಿದು ಮೋಜು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಆರ್‌ಟಿಒ ಕಚೇರಿಯಲ್ಲಿ ನೋಂದಾಯಿತವಾಗಿರುವ KA 22 G 2888 ಸಂಖ್ಯೆಯ ಈ ಸರ್ಕಾರಿ ವಾಹನವನ್ನು ರಸ್ತೆ ಬದಿಯಲ್ಲೇ ರಾಜಾರೋಷವಾಗಿ ನಿಲ್ಲಿಸಿ, ಅಧಿಕಾರಿ ಒಳಗಡೆ ಮದ್ಯಪಾನದಲ್ಲಿ ಮುಳುಗಿದ್ದರು.
ಸ್ಥಳೀಯರು ಹಾಗೂ ಕೆಲವರು ಈ ಬಗ್ಗೆ ಪ್ರಶ್ನಿಸಲು ಮುಂದಾದಾಗ ಎಚ್ಚೆತ್ತುಕೊಂಡ ಅಧಿಕಾರಿ, ಯಾವುದೇ ಉತ್ತರ ನೀಡದೆ ತಕ್ಷಣವೇ ವಾಹನದೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ. ಕರ್ತವ್ಯದ ಸಮಯದಲ್ಲಿ ಅಥವಾ ಸರ್ಕಾರಿ ಸೌಲಭ್ಯವನ್ನು ಬಳಸಿಕೊಂಡು ಈ ರೀತಿ ಬಾರ್‌ಗಳಿಗೆ ಭೇಟಿ ನೀಡುವುದು ನಿಯಮಬಾಹಿರವಾಗಿದ್ದರೂ, ಸದರಿ ಅಧಿಕಾರಿ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ವರ್ತಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಾಹನ ಯಾವ ಇಲಾಖೆಗೆ ಸೇರಿದ್ದು ಮತ್ತು ಆ ಅಧಿಕಾರಿ ಯಾರು ಎಂಬ ಬಗ್ಗೆ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

