ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಬದಿಯ ಮೆಟಲ್ ಬ್ಯಾರಿಯರ್‌ಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಖತರ್ನಾಕ್ ಕಳ್ಳರನ್ನು ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ. ಹಲಗಾ-ತಾರಿಹಾಳ ರಸ್ತೆಯಲ್ಲಿ ನಡೆದಿದ್ದ ಈ ಕಳ್ಳತನ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು, ಆರೋಪಿಗಳ ಸಮೇತ ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮೆಟಲ್ ಕಟರ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ಮುದಕಪ್ಪ ಲಕ್ಷ್ಮಪ್ಪ ಹುರಳಸಂಗಟ, ಲಕ್ಷಣ ಸತ್ಯಪ್ಪ ನಂದಿ, ಸಿದ್ದಪ್ಪ ಲಕ್ಕಪ್ಪ ದಳವಾಯಿ ಹಾಗೂ ಲಕ್ಷಪ್ಪ ಎಂಬುವವರೇ ಬಂಧಿತ ಆರೋಪಿಗಳು. ಇವರು ಹಲಗಾ ಗ್ರಾಮದ ಶಗನಮಟ್ಟಿ ಕ್ರಾಸ್ ಬಳಿ ರಸ್ತೆ ಬದಿಯಲ್ಲಿದ್ದ 35 ಮೆಟಲ್ ಸ್ಟೇಸರ್ ಚಾನೆಲ್ ಸೆಕ್ಷನ್‌ಗಳನ್ನು ಕದ್ದಿದ್ದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮಾರುತಿ ಆದಾಪೂರ ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪಿಐ ಸುಂದ್ರೇಶ ಹೊಳೆನ್ನವರ ನೇತೃತ್ವದ ತಂಡ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಸತ್ಯಾಂಶ ಹೊರಬಿದ್ದಿದೆ.
ಬಂಧಿತರಿಂದ ಸುಮಾರು 4,33,450 ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 32,400 ರೂ. ಮೌಲ್ಯದ ಮೆಟಲ್ ಚಾನೆಲ್‌ಗಳು, ಕಳ್ಳತನಕ್ಕೆ ಬಳಸಿದ್ದ 4 ಲಕ್ಷ ರೂ. ಮೌಲ್ಯದ ಟೆಂಪೋ ಟ್ರಾಕ್ಸ್ ಗಾಮಾ ವಾಹನ ಹಾಗೂ ಮೆಟಲ್ ಕಟರ್ ಮಿಷನ್‌ಗಳು ಸೇರಿವೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಹಿರೇಬಾಗೇವಾಡಿ ಪೊಲೀಸ್ ತಂಡದ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ. ಈ ಪ್ರಕರಣದಲ್ಲಿ ತಾಂತ್ರಿಕ ವಿಭಾಗದ ರಮೇಶ ಅಕ್ಕಿ ಸೇರಿದಂತೆ ಹಲವು ಸಿಬ್ಬಂದಿಗಳು ಮಹತ್ವದ ಪಾತ್ರ ವಹಿಸಿದ್ದಾರೆ.
